ಕೊಲ್ಕತ್ತಾ, ಜೂ16(Daijiworld News/SS): ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯು ಆರನೇ ದಿನವಾದ ಭಾನುವಾರವೂ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿದೆ.
ಈಗಾಗಲೇ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಮುಷ್ಕರ ನಡೆಸುತ್ತಿರುವ ವೈದ್ಯರ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದ್ದೇವೆ. ಅವರು ಮತ್ತೆ ಸೇವೆಗೆ ಮರಳಿದರೆ ಹೆಚ್ಚಿನದನ್ನು ಕೊಡಲು ಸಿದ್ದರಿದ್ದೇವೆ. ನಾನು ನನ್ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದೇನೆ ಮತ್ತು ಕಿರಿಯ ವೈದ್ಯರು ಸಭೆಯಲ್ಲಿ ಪಾಲ್ಗೊಳ್ಳಲು ಕಾಯುತ್ತಿದ್ದೇನೆ. ವೈದ್ಯರು ಸಾಂವಿಧಾನಿಕ ಸಂಸ್ಥೆಗೆ ಗೌರವ ತೋರಿಸಬೇಕು ಎಂದು ಹೇಳಿಕೊಂಡಿದೆ. ಆದರೂ ವೈದ್ಯರು ದೀದಿಯ ಮನವಿಯನ್ನು ತಿರಸ್ಕರಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವೈದ್ಯರ ಪ್ರತಿಭಟನೆ ಅಂತಿಮ ಘಟ್ಟ ತಲುಪಿದೆ ಎನ್ನುತ್ತಿರುವಾಗಲೇ ಸರ್ಕಾರ ನಡೆಸಿರುವ ಸಂಧಾನ ಪ್ರಯತ್ನ ಕಣ್ಣೊರೆಸುವ ತಂತ್ರಗಾರಿಕೆ ಎಂದು ವೈದ್ಯರು ಕಿಡಿಕಾರಿದ್ದಾರೆ.
ವೈದ್ಯರ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಸಿಎಂ ಮಮತಾ ಬ್ಯಾನರ್ಜಿ ವೈದ್ಯರೊಂದಿಗೆ ಸಂಧಾನ ಸಭೆಗೆ ಮುಂದಾಗಿದ್ದಾರೆಯಾದರೂ, ಸರ್ಕಾರದ ಸಂಧಾನಸಭೆ ಕುರಿತು ವೈದ್ಯರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಆರಂಭದಲ್ಲಿ ಬಂಗಾಳ ಸಚಿವಾಲಯದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತಾದರೂ, ಬಳಿಕ ಅಧಿಕಾರಿಗಳು ತಾವು ಹೇಳುವ ಜಾಗದಲ್ಲೇ ಸಂಧಾನಸಭೆ ನಡೆಯಬೇಕು ಎಂದು ಬೇಡಿಕೆ ಇರಿಸಿದ್ದಾರೆ. ಹೀಗಾಗಿ ಸರ್ಕಾರದಿಂದ ಸಂಧಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ ಎಂದು ಕಿಡಿಕಾರಿದ್ದಾರೆ.