ನವದೆಹಲಿ, ಮಾ.31 (DaijiworldNews/AK):ಯುವ ಐಎಫ್ಎಸ್ ಅಧಿಕಾರಿ ನಿಧಿ ತಿವಾರಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

2014 ರ ಬ್ಯಾಚ್ನ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿಯಾಗಿರುವ ನಿಧಿ ತಿವಾರಿ ಅವರನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ತಕ್ಷಣದಿಂದ ಜಾರಿಗೆ ಬರುವಂತೆ ನೇಮಕಾತಿಯನ್ನು ಅನುಮೋದಿಸಿದೆ.
ವಾರಣಾಸಿಯ ಮೆಹಮುರ್ಗಂಜ್ ಮೂಲದ ನಿಧಿ ತಿವಾರಿ 2013 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 96ನೇ ರ್ಯಾಂಕ್ ಗಳಿಸಿದ್ದರು. ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಪ್ರಧಾನಿ ಮೋದಿ 2014ರಿಂದ ಪ್ರತಿನಿಧಿಸುತ್ತಿದ್ದಾರೆ.2016ರಲ್ಲಿ ಅತ್ಯುತ್ತಮ ತರಬೇತಿ ಅಧಿಕಾರಿ ಮತ್ತು ಪ್ರಬಂಧಕ್ಕೆ ರಾಯಭಾರಿ ಬಿಮಲ್ ಸನ್ಯಾಲ್ ಸ್ಮಾರಕ ಪದಕವನ್ನು ನೀಡಿ ಪುರಸ್ಕರಿಸಲಾಗಿತ್ತು. ತಿವಾರಿ ಅವರು ಜನವರಿ 6, 2023 ರಿಂದ ಪ್ರಧಾನ ಮಂತ್ರಿ ಕಚೇರಿಯಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು 2022ರಲ್ಲಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಸೇರ್ಪಡೆಯಾದರು.
ಸದ್ಯ ವಿವೇಕ್ ಕುಮಾರ್ ಮತ್ತು ಹಾರ್ದಿಕ್ ಸತೀಶ್ಚಂದ್ರ ಶಾ ಅವರು ಮೋದಿ ಅವರ ಖಾಸಗಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.