ಬೆಂಗಳೂರು, ಜೂ16(Daijiworld News/SS): ಮುಂದಿನ 48 ಗಂಟೆಗಳಲ್ಲಿ ವಾಯು ಚಂಡಮಾರುತಕ್ಕೆ ಮತ್ತೆ ತನ್ನ ದಿಕ್ಕು ಬದಲಿಸಿ ಗುಜರಾತ್ನ ಕಚ್ ಕರಾವಳಿ ಭಾಗಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನಲೆಯಲ್ಲಿ, 48 ಗಂಟೆಗಳಲ್ಲಿ ಕರ್ನಾಟಕದಲ್ಲಿಯೂ ಭಾರಿ ಮಳೆ ಬರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ರಾಜ್ಯಕ್ಕೆ ತಡವಾಗಿ ಪ್ರವೇಶಿರುವ ಮುಂಗಾರು ಇನ್ನೆರೆಡು ದಿನಗಳಲ್ಲಿ ದಕ್ಷಿಣ ಒಳನಾಡಿನಾದ್ಯಂತ ಚುರುಕುಗೊಳ್ಳು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಭಾನುವಾರ ಒಣ ಹವೆ ಕಂಡು ಬಂದಿದ್ದು, ಕೆಲ ಜಿಲ್ಲೆಗಳಲ್ಲಿ ಮಾತ್ರವೇ ಮಳೆಯಾಗಿದೆ .
ಚಂಡಮಾರುತ ಪ್ರಭಾವ ಕುಗ್ಗುತ್ತಿದ್ದಂತೆ ದ.ಕ ಜಿಲ್ಲೆಯಲ್ಲಿಯೂ ಮಳೆ ಕ್ಷೀಣಿಸಿದೆ. ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಮೈಸೂರು ಜಿಲ್ಲೆಗಳಿಗೆ ಜೂ.14ರಂದು ಮುಂಗಾರು ಪ್ರವೇಶಿಸಿದ್ದು, ದುರ್ಬಲವಾಗಿದೆ. ಹೀಗಾಗಿ ಕರಾವಳಿಯಲ್ಲಿ ಆಗಾಗ ಮಳೆ ಮತ್ತು ಬಿಸಿಲಿನ ವಾತಾವರಣ ಕಂಡುಬಂದಿದೆ.
ವಾಯು ಚಂಡಮಾರುತದ ಪ್ರಭಾವದಿಂದ ಕಳೆದೆರಡು ದಿನಗಳಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಚುರುಕಾಗಿದ್ದ ಮಳೆ ಕಳೆದ 2 ದಿನಗಳಿಂದ ಕ್ಷೀಣಿಸಿದೆ. ಮುಂಜಾನೆವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆಯಾಗಿದ್ದು, ಬಳಿಕ ಬಿಸಿಲು ಆವರಿಸಿದೆ.
ಮಂಗಳೂರು, ಸುಬ್ರಹ್ಮಣ್ಯದಲ್ಲಿ ಬಿಸಿಲು ಮತ್ತು ಹಗುರ ಮಳೆಯಾದರೆ, ಬೆಳ್ತಂಗಡಿ, ಪುತ್ತೂರಿನಲ್ಲಿ ಸಾಧಾರಣ ಮಳೆಯಾಗಿದೆ. ಮಳೆ ಕಡಿಮೆಯಾಗಿರುವುದರಿಂದ ಕಡಲಿನಬ್ಬರವು ಕೊಂಚ ಕಡಿಮೆಯಾಗಿದೆ. ಸೋಮೇಶ್ವರ, ಉಳ್ಳಾಲ, ಉಚ್ಚಿಲದಲ್ಲಿ ಹೆಚ್ಚಾಗಿದ್ದ ಕಡಲ್ಕೊರೆತ ಸ್ವಲ್ಪ ಹತೋಟಿಗೆ ಬಂದಿದೆ ಎನ್ನಲಾಗಿದೆ.