ಧಾರವಾಡ, ಏ. 01(DaijiworldNews/TA): ಹೊಲ್ತಿಕೋಟಿ ಗ್ರಾಮದಲ್ಲಿ ಮಹಿಳೆಯರು ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರ ಸಾರಿದ ಘಟನೆ ನಡೆದಿದೆ. ಮಹಿಳೆಯರು ಸ್ವತಃ ಮದ್ಯ ಮಾರುವ ಅಂಗಡಿಗಳಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ಕೈದು ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಮದ್ಯ ಸೇವಿಸಿದ ಬಳಿಕ ಎಣ್ಣೆ ಪ್ರಿಯರು ಗ್ರಾಮದ ಬೀದಿಗಳಲ್ಲಿ, ಶಾಲಾ ಆವರಣದಲ್ಲಿ, ದೇವಸ್ಥಾನಗಳ ಎದುರು ಪ್ಯಾಕೆಟ್ಗಳನ್ನು ಎಸೆದು ಶುಚಿತ್ವಕ್ಕೆ ಧಕ್ಕೆ ಮಾಡುತ್ತಿದ್ದಾರೆ. ಇದು ಪ್ರತಿನಿತ್ಯದ ಸಮಸ್ಯೆಯಾಗಿದೆ. ನಿತ್ಯವೂ ರಾಶಿ ರಾಶಿ ಪ್ಯಾಕೆಟ್ ತೆಗೆದು ಗ್ರಾಮಸ್ಥರು ರೋಸಿ ಹೋಗಿದ್ದಾರೆ ಎಂದು ಹೇಳಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಗಮನಕ್ಕೆ ಕೂಡ ಗ್ರಾಮಸ್ಥರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ತಿಳಿಸಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಮಹಿಳೆಯರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಆಕ್ರೋಶಗೊಂಡ ಮಹಿಳೆಯರು ಸ್ವತಃ ಮದ್ಯ ಮಾರುವ ಅಂಗಡಿಗಳಿಗೆ ಮುತ್ತಿಗೆ ಹಾಕಿದ್ದಾರೆ. ಅಂಗಡಿಕಾರರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಬಕಾರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.