ಬೆಂಗಳೂರು,ಏ. 01(DaijiworldNews/AK): ಬೆಲೆ ಏರಿಕೆ ವಿಚಾರದಲ್ಲಿ ಇವರು ತೆಗೆದುಕೊಳ್ಳುವ ಕೆಟ್ಟ ನಿರ್ಧಾರಗಳಿಗೆ ಕೇಂದ್ರ ಸರಕಾರ ಹೊಣೆ ಎಂದು ದೂರು ಹಾಕುತ್ತಾರೆ. ವಾಸ್ತವಿಕವಾಗಿ ರಾಜ್ಯ ಸರಕಾರ, ಮುಖ್ಯಮಂತ್ರಿಗಳು ತಮ್ಮ ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೆ, ವಿಲಿವಿಲಿ ಒದ್ದಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಕದ ತೆಲಂಗಾಣದ ಪರಿಸ್ಥಿತಿ ಏನಾಗಿದೆ? ಎಂದು ಪ್ರಿಯಾಂಕ್ ಖರ್ಗೆ ಮತ್ತು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು. ತೆಲಂಗಾಣದಲ್ಲಿ ಸಂಬಳ ಕೊಡಲೂ ಆಗುತ್ತಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಗಮನ ಸೆಳೆದರು.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಗ್ಯಾರಂಟಿ ದೇಶಕ್ಕೇ ಮಾದರಿ ಎನ್ನುತ್ತ ಹಿಮಾಚಲ ಪ್ರದೇಶವನ್ನೂ ಮುಳುಗಿಸುವ ಕೆಲಸ ಇವರು ಮಾಡಿದ್ದಾರೆ. ಇವರ ಗ್ಯಾರಂಟಿಗಳು ದೇಶಕ್ಕೇ ಮಾದರಿ ಎಂದು ಹೇಳುತ್ತ, ಮಿಗತೆ ಬಜೆಟ್ ಮಂಡಿಸುವ ಹಾಗೂ ಹಣಕಾಸಿನ ಕೊರತೆ ಇರದ ತೆಲಂಗಾಣದಲ್ಲಿ ಈಗ ಗ್ಯಾರಂಟಿ ಪರಿಣಾಮವಾಗಿ ನೌಕರರು, ಅಧಿಕಾರಿಗಳಿಗೆ ಸಂಬಳ ಕೊಡಲಾಗದ ದುಸ್ಥಿತಿ ಬಂದಿದೆ ಎಂದು ವಿಶ್ಲೇಷಿಸಿದರು.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಇದೆ. ಇದೇ ಗ್ಯಾರಂಟಿಗಳನ್ನು ಅಲ್ಲೂ ಅನುಷ್ಠಾನಕ್ಕೆ ತಂದು ಸರಕಾರಿ ನೌಕರರಿಗೆ ಸಂಬಳ ಕೊಡಲು ದೇವಸ್ಥಾನಗಳಿಂದ ದುಡ್ಡು ವಸೂಲಿ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಏನಾಗಿದೆ? ದೆಹಲಿಯ ಜನತೆ ಅಲ್ಲಿನ ಆಮ್ ಆದ್ಮಿ ಪಕ್ಷ ಕೊಟ್ಟ ಗ್ಯಾರಂಟಿಗಳಿಂದ ಬೇಸತ್ತು ಆ ಸರಕಾರವನ್ನು ಕಿತ್ತೊಗೆದು ಬಿಜೆಪಿಯನ್ನು 27 ವರ್ಷಗಳ ನಂತರ ಅಧಿಕಾರಕ್ಕೆ ತಂದಿದ್ದಾರೆ ಎಂದು ತಿಳಿಸಿದರು.
ನಮ್ಮ ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿ ಅತಿ ಬುದ್ಧಿವಂತ ಸಚಿವರಿದ್ದಾರೆ. ಮಾತೆತ್ತಿದರೆ ಕೇಂದ್ರ ಸರಕಾರ, ನರೇಂದ್ರ ಮೋದಿಜೀ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ಇವರ ಹುಳುಕು ಮುಚ್ಚಿ ಹಾಕುವ ಸಲುವಾಗಿ ಕೇಂದ್ರ ಸರಕಾರವನ್ನು ದೂರುತ್ತಾರೆಯೇ ಹೊರತು, ಒಟ್ಟಾರೆಯಾಗಿ ರಾಜ್ಯದಲ್ಲಿರುವ ಅನುಭವಿ ಮುಖ್ಯಮಂತ್ರಿಗಳು ಹಣಕಾಸಿನ ವಿಚಾರದಲ್ಲಿ ಎಡವಿದ್ದಾರೆ ಎಂದರು.
ಇವರ ನಿರ್ಧಾರಗಳ ಕಾರಣದಿಂದ ಜನಸಾಮಾನ್ಯರ ಮೇಲೆ ದೇಶದಲ್ಲೇ ಗರಿಷ್ಠ ಬೆಲೆ ಏರಿಕೆಯ ಹೊರೆ ಬೀಳುತ್ತಿದೆ. ನೀರಿನ ದರ, ಸ್ಟಾಂಪ್ ಡ್ಯೂಟಿ, ವಿದ್ಯುತ್, ಬೆಂಗಳೂರಿನ ಮೆಟ್ರೋ ಪ್ರಯಾಣ ದರ ಹೆಚ್ಚಿಸಿದ್ದು, ಕಸಕ್ಕೂ ತೆರಿಗೆ ವಿಧಿಸುತ್ತಿದ್ದಾರೆ. ಮನುಷ್ಯರು ಉಸಿರಾಡುವ ಗಾಳಿಗೂ ತೆರಿಗೆ ಹಾಕುವ ದಿನಗಳು ಬಂದರೂ ಅಚ್ಚರಿ ಇಲ್ಲ ಎಂದು ಟೀಕಿಸಿದರು.ರಾಜ್ಯದ ಮುಖ್ಯಮಂತ್ರಿಗಳು ಸತ್ಯಾಂಶವನ್ನು ಹೊರಗಡೆ ಇಡುತ್ತಿಲ್ಲ; ಅದಕ್ಕಾಗಿಯೇ ಕೇಂದ್ರ ಸರಕಾರ, ನರೇಂದ್ರ ಮೋದಿಜೀ ಅವರನ್ನು ದೂರುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.