ಬೆಂಗಳೂರು,ಜೂ16(Daijiworld News/AZM): "ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಎಚ್ ವಿಶ್ವನಾಥ್ ಅವರನ್ನು ಬಿಟ್ಟರೆ ಬೇರೆ ಯಾರನ್ನೂ ಅಧ್ಯಕ್ಷರನ್ನಾಗಿ ಮಾಡುವುದಿಲ್ಲ. ಆ ಸ್ಥಾನದಲ್ಲಿ ಅವರೇ ಮುಂದುವರಿಯುತ್ತಾರೆ. ಸಧ್ಯದಲ್ಲೇ ಅವರ ಮನವೊಲಿಸುವ ಕಾರ್ಯ ನಡೆಯುತ್ತಿದ್ದು, ಅವರು ಬರುವ ತನಕ ಸ್ಥಾನ ಹಾಗೆಯೇ ಖಾಲಿ ಇರುತ್ತದೆ ಎಂದು ಮಾಜೀ ಪ್ರಧಾನಿ ದೇವೇಗೌಡರು ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಬೇಕೆಂದು ಎಚ್.ವಿಶ್ವನಾಥ್ ಅವರು ಕೇಳಲಿಲ್ಲ. ಮೈಸೂರು ಜಿಲ್ಲಾ ರಾಜಕಾರಣದಲ್ಲಿ ಎಚ್ ವಿಶ್ವನಾಥ್ ಅವರಿಗೆ ಬೇಸರವಾಗಿರೋದು ನಿಜ. ಸದ್ಯದಲ್ಲೇ ಅವರ ಮನವೊಲಿಸುತ್ತೇವೆ" ಎಂದು ತಿಳಿಸಿದರು.
ಇನ್ನು ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಅವರನ್ನು ಕಣಕ್ಕಿಳಿಸುವ ಉದ್ದೇಶ ಇರಲಿಲ್ಲ. ಆದರೆ, ಮಂಡ್ಯದ ಜೆಡಿಎಸ್ ಮುಖಂಡರೇ ನಿಲ್ಲಿಸುವಂತೆ ನಮಗೆ ಒತ್ತಾಯಿಸಿದ್ದರು. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕಣಕ್ಕಿಳಿಸಬೇಕಾಯ್ತು ಎಂದು ನಿಖಿಲ್ ಸ್ಪರ್ಧೆಯನ್ನು ಸಮರ್ಥಿಸಿಕೊಂಡರು.
ಹೀಗೆಯೇ ಮಾತು ಮುಂದುವರೆಸಿದ ದೊಡ್ಡಗೌಡರು, ನಿಖಿಲ್ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇದ್ದರು. ಮಂಡ್ಯದ ಚುನಾವಣೆಯಲ್ಲಿ ಸೋತರೂ ಸುಮ್ಮನೆ ಕೂರುವ ವ್ಯಕ್ತಿಯಲ್ಲ. ರಾಜಕೀಯದಲ್ಲಿಯೇ ಇದ್ದು ಹೋರಾಟ ಮಾಡುವ ಸ್ವಭಾವ ಇದೆ. ಸಿನಿಮಾ ಕ್ಷೇತ್ರಕ್ಕಿಂತ ಹೆಚ್ಚಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು.
ಇನ್ನು ಪ್ರಜ್ವಲ್ ರೇವಣ್ಣಗೆ ಹಾಸನ ಕ್ಷೇತ್ರ ಬಿಟ್ಟುಕೊಡೋದಾಗಿ ಮೊದಲೇ ಹೇಳಿದ್ದೆ. ತುಮಕೂರಿನಲ್ಲಿ ನನ್ನ ಸೋಲಿಗೆ ಯಾರನ್ನು ಹೊಣೆ ಮಾಡೋದಿಲ್ಲ. ಯಾರನ್ನು ಟಾರ್ಗೆಟ್ ಮಾಡೋದು ಸರಿಯಲ್ಲ. ಸೋತ ಬಗ್ಗೆ ಚರ್ಚೆ ಬೇಡ, ನಾನೀಗ ಪಕ್ಷ ಸಂಘಟನೆ ಮಾಡ್ತಿದ್ದೇನೆ ಎಂದು ತಿಳಿಸಿದರು.