ಬೆಂಗಳೂರು, ಏ.02 (DaijiworldNews/AA): ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸುತ್ತಿರುವ ಏಕಾಂಗಿ ಹೋರಾಟಕ್ಕೆ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ನಡೆ ಸರಿಯಲ್ಲ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ಇಂದಿನಿಂದ ಅಹೋರಾತ್ರಿ ಧರಣಿ ಮಾಡ್ತಿದೆ. ಆದರೆ ನಮ್ಮನ್ನ ಕರೆದಿಲ್ಲ. ಜೆಡಿಎಸ್ಗೆ ಮೇಲುಗೈ ಆಗುತ್ತದೆ ಎಂದು ಬಿಜೆಪಿ ನಮ್ಮನ್ನ ಕರೆದಿಲ್ಲ. ಮುಡಾ ಪಾದಯಾತ್ರೆಯಲ್ಲಿ ಹೀಗೆ ಆಯ್ತು. ಈಗಲೂ ಹೀಗೆ ಆಗಿದೆ. ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇವೆ. ಒಟ್ಟಾಗಿ ಹೋರಾಟ ಮಾಡಬೇಕು. ರಾಜ್ಯದಲ್ಲಿ ಸಮನ್ವಯ ಸಾಧಿಸಲು ಒಂದು ಸಮಿತಿ ರಚಿಸಿಬೇಕು ಎಂದು ಒತ್ತಾಯಿಸಿದರು.
ಮೊದಲಿಂದಲೂ ನಾವು ಸಮನ್ವಯ ಸಮಿತಿ ಮಾಡಿ ಎಂದು ಹೇಳ್ತಿದ್ದೇವೆ. ಒಟ್ಟಾಗಿ ಹೋರಾಟ ಮಾಡಿದರೆ ಪ್ರಬಲವಾಗಿ ಇರುತ್ತದೆ. ನಾವು ಒಟ್ಟಾಗಿ ಹೋರಾಟ ಮಾಡಿದರೆ ಸರ್ಕಾರಕ್ಕೆ ಭಯ ಇರುತ್ತದೆ. ನಮ್ಮ ಪಕ್ಷಕ್ಕೆ ಬಿಜೆಪಿ ಹೋರಾಟ ಬಗ್ಗೆ ನಮಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ದೇವೇಗೌಡ, ಕುಮಾರಸ್ವಾಮಿ ಅವರಿಗೂ ಕೇಳಿದೆ ಯಾರಿಗೂ ಹೇಳಿಲ್ಲ. ಇದು ಸರಿಯಾದ ಬೆಳವಣಿಗೆ ಅಲ್ಲ. ಇಬ್ಬರು ಒಟ್ಟಾಗಿ ಹೋಗಬೇಕು. ಈ ನಿಟ್ಟಿನಲ್ಲಿ ಎರಡು ಪಕ್ಷಗಳು ಕೂತು ಮಾಡಬೇಕು ಎಂದು ಹೇಳಿದರು.
ಸಮನ್ವಯದ ಕೊರತೆ ಬಗ್ಗೆ ಕೇಂದ್ರದ ನಾಯಕರಿಗೆ ಗೊತ್ತಿಲ್ಲ ಅನ್ನಿಸುತ್ತದೆ. ರಾಜ್ಯ ನಾಯಕರು ಇದನ್ನ ಮಾಡುತ್ತಿದ್ದಾರೆ. ನಿಖಿಲ್, ಬಿಜೆಪಿ ಅವರು ಘೋಷಣೆ ಮಾಡಿದರು ಎಂದು ನಾವು ಹೋರಾಟ ಮಾಡುತ್ತೇವೆ ಅಂತ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ನಾವು ಪ್ರತ್ಯೇಕ ಹೋರಾಟ ಅಂತ ಹೇಳಿದ್ದಾರೆ. ಇದು ಅವರ ಮನಸ್ಥಿತಿ ತೋರಿಸುತ್ತದೆ. ಎರಡು ಪಕ್ಷಗಳು ಪ್ರತ್ಯೇಕವಾಗಿ ಹೋರಾಟ ಮಾಡೋದು ಸರಿಯಲ್ಲ. ಎರಡು ಪಕ್ಷದ ವರಿಷ್ಠರು ಇದರ ಬಗ್ಗೆ ಸಮನ್ವಯ ಮಾಡಬೇಕು. ಇಲ್ಲದೆ ಹೋದರೆ ಎರಡು ಪಕ್ಷಕ್ಕೆ ಸಮಸ್ಯೆ ಆಗುತ್ತದೆ. ರಾಜ್ಯಮಟ್ಟದಲ್ಲಿ ಹೊಂದಾಣಿಕೆ ಬಗ್ಗೆ ಮಾತಾಡಬೇಕು ಎಂದು ತಿಳಿಸಿದರು.