ನವದೆಹಲಿ, ಏ.02 (DaijiworldNews/AA): ವಕ್ಫ್ ತಿದ್ದುಪಡಿ ಮಸೂದೆ, 2024 ಅನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಪತ್ರ ಬರೆದಿದ್ದಾರೆ.

ಸಂವಿಧಾನವು ಪ್ರತಿಯೊಬ್ಬ ನಾಗರಿಕರಿಗೂ ತಮ್ಮ ಧರ್ಮವನ್ನು ಅನುಸರಿಸುವ ಹಕ್ಕನ್ನು ನೀಡುತ್ತದೆ. ಈ ಹಕ್ಕನ್ನು ಎತ್ತಿಹಿಡಿಯುವುದು ಮತ್ತು ರಕ್ಷಿಸುವುದು ಚುನಾಯಿತ ಸರ್ಕಾರಗಳ ಕರ್ತವ್ಯವಾಗಿದೆ. ಆದರೆ, 1995ರ ವಕ್ಫ್ ಕಾಯ್ದೆಗೆ ಪ್ರಸ್ತಾಪಿಸಲಾದ ತಿದ್ದುಪಡಿಗಳು ಅಲ್ಪಸಂಖ್ಯಾತರಿಗೆ ನೀಡಲಾದ ಸಾಂವಿಧಾನಿಕ ರಕ್ಷಣೆಯನ್ನು ಪರಿಗಣಿಸಿಲ್ಲ. ಇದು ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ತೀವ್ರ ಹಾನಿಯನ್ನುಂಟುಮಾಡುತ್ತವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಮಿಳುನಾಡು ವಿಧಾನಸಭೆಯು ಕೆಲವು ದಿನಗಳ ಹಿಂದೆ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸಲು ನಿರ್ಣಯವನ್ನು ಅಂಗೀಕರಿಸಿತು. ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯಲ್ಲಿರುವ ನಿಬಂಧನೆಗಳು ಕಾಲಾತೀತವಾಗಿದ್ದು, ಅವು ವಕ್ಫ್ನ ಆಸ್ತಿಗಳಿಗೆ ರಕ್ಷಣೆ ನೀಡುತ್ತವೆ. ವಕ್ಫ್ ಕಾಯ್ದೆಗೆ ಪ್ರಸ್ತಾಪಿಸಲಾದ ತಿದ್ದುಪಡಿಗಳು ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ರಕ್ಷಣೆಯಲ್ಲಿ ವಕ್ಫ್ ಮಂಡಳಿಗಳ ಅಧಿಕಾರ ಮತ್ತು ಜವಾಬ್ದಾರಿಗಳನ್ನು ದುರ್ಬಲಗೊಳಿಸುತ್ತವೆ ಎಂದು ತಿಳಿಸಿದ್ದಾರೆ.