ನವದೆಹಲಿ,ಜೂ16(Daijiworld News/AZM):ಕೇಂದ್ರ ಸರಕಾರದಿಂದ ಇಂದು ಸರ್ವ ಪಕ್ಷಗಳ ಸಭೆ ನಡೆದಿದ್ದು,ಸಭೆಯಲ್ಲಿ ಕೃಷಿ ವಲಯದ ಮೇಲಿನ ಒತ್ತಡ, ನಿರುದ್ಯೋಗ ಹಾಗೂ ಬರ ಪರಿಸ್ಥಿತಿಯ ಬಗ್ಗೆ ಸಂಸತ್ ನಲ್ಲಿ ಚರ್ಚಿಸಲು ವಿಪಕ್ಷಗಳು ಒತ್ತಾಯ ಮಾಡಿವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ರಾಜ್ಯಸಭಾದ ವಿಪಕ್ಷ ನಾಯಕ ಗುಲಾಂ ನಬಿ ಅಜಾದ್, ನ್ಯಾಷನಲ್ ಕಾನ್ಫರೆನ್ಸ್ ನ ನಾಯಕ ಫಾರೂಕ್ ಅಬ್ದುಲ್ಲಾ ಹಾಗೂ ಟಿಎಂಸಿ ನಾಯಕ ಡೆರೆಕ್ ಒಬ್ರಯಾನ್ ಪಾಲ್ಗೊಂಡಿದ್ದರು.
ಲೋಕಸಭೆ ಹಾಗೂ ರಾಜ್ಯ ಸಭೆಯನ್ನು ಪ್ರತಿನಿಧಿಸುವ ಎಲ್ಲ ಪಕ್ಷಗಳ ಮುಖ್ಯಸ್ಥರ ಸಭೆಯನ್ನು ಜೂನ್ ಹತ್ತೊಂಬತ್ತರಂದು ಪ್ರಧಾನಿ ಕರೆದಿದ್ದು, "ಒಂದು ದೇಶ, ಒಂದು ಚುನಾವಣೆ" ವಿಚಾರವಾಗಿ ಚರ್ಚೆ ಮಾಡಲಿದ್ದಾರೆ. ಜತೆಗೆ ಭಾರತದ ಎಪ್ಪತ್ತೈದನೇ ಸ್ವಾತಂತ್ರ್ಯ ವರ್ಷಾಚರಣೆ, ಮಹಾತ್ಮ ಗಾಂಧಿ ನೂರೈವತ್ತನೇ ಜನ್ಮ ವರ್ಷಾಚರಣೆ, 'ಮಹತ್ವಾಕಾಂಕ್ಷಿ ಜಿಲ್ಲೆಗಳು' ಬಗ್ಗೆ ಕೂಡ ಚರ್ಚೆ ಮಾಡುತ್ತಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸಭೆ ನಂತರ ಹೇಳಿದ್ದಾರೆ.
ಜೂನ್ ಇಪ್ಪತ್ತನೇ ತಾರೀಕು ಇದೇ ವಿಚಾರಗಳನ್ನು ಚರ್ಚೆ ಮಾಡುವ ಸಲುವಾಗಿಯೇ ಸಂಸದರ ಸಭೆ ಕರೆದಿದ್ದಾರೆ. ಮಾಧ್ಯಮದವರ ಜತೆ ಮಾತನಾಡಿದ ಗುಲಾಂ ನಬಿ ಅಜಾದ್, ಜನರ ಆಸಕ್ತಿ ಪರವಾಗಿ ಇರುವ ಯಾವುದೇ ಮಸೂದೆಗೆ ನಮ್ಮ ವಿರೋಧ ಇಲ್ಲ ಎಂದು ಹೇಳಿದ್ದಾರೆ.
ರೈತರ ಸಮಸ್ಯೆಗಳು, ನಿರುದ್ಯೋಗ, ಬರ ಪರಿಸ್ಥಿತಿ ಬಗ್ಗೆ ಚರ್ಚೆ ಆಗಬೇಕು. ಇನ್ನು ಸದ್ಯಕ್ಕೆ ರಾಷ್ಟ್ರಪತಿ ಆಡಳಿತ ಇರುವ ಜಮ್ಮು- ಕಾಶ್ಮೀರದಲ್ಲಿ ಶೀಘ್ರವೇ ವಿಧಾನಸಭೆ ಚುನಾವಣೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನವನ್ನು ಮೀಸಲಿಡುವ ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ತರಬೇಕು ಎಂದು ಟಿಎಂಸಿಯ ಒ ಬ್ರಯಾನ್ ಒತ್ತಾಯಿಸಿದ್ದಾರೆ. ಇನ್ನು ಹೊಸದಾಗಿ ರಚನೆಯಾಗಿರುವ ಹದಿನೇಳನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 17ರಿಂದ ಜುಲೈ 26ರವರೆಗೆ ನಡೆಯಲಿದೆ