ನವದೆಹಲಿ,ಜೂ16(Daijiworld News/AZM):ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿಯವರ ಜೊತೆ ಮಾತುಕತೆ ನಡೆಸಲು ವೈದ್ಯರು ಸಿದ್ದರಾಗಿದ್ದು, ಮುಷ್ಕರ ಅಂತ್ಯ ಕಾಣುವ ಸಾಧ್ಯತೆ ಇದೆ.
ಮಾಧ್ಯಮಗಳ ಮುಂದೆಯೇ ಮಾತುಕತೆ ನಡೆಯಬೇಕಾಗಿದ್ದು, ಸಿಎಂ ನಿರ್ಧರಿಸಿದ ಸ್ಥಳಕ್ಕೆ ನಾವು ಹೋಗಲು ಸಿದ್ದರಿದ್ದೇವೆ.ಯಾವುದೇ ಕಾರಣಕ್ಕೂ ಸಂಧಾನಕ್ಕೆ ಮುಂದಾಗಬಾರದು, ಬದಲಿಗೆ ಪಾರದರ್ಶಕ ಚರ್ಚೆ ಮಾಡಬೇಕು. ಹಾಗೆಯೇ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ವೈದ್ಯರು ಒತ್ತಾಯಿಸಿದ್ಧಾರೆ.
ಇತ್ತೀಚೆಗೆ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದ ಮಮತಾ ಬ್ಯಾನರ್ಜಿ, "ವೈದ್ಯರ ಪ್ರಮುಖ ಬೇಡಿಕೆಗಳನ್ನು ಈಡೇರಿಸುತ್ತೇವೆ. ಅವರ ವಿರುದ್ಧ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಎಸ್ಮಾ) ಜಾರಿಗೊಳಿಸುವುದಿಲ್ಲ. ಎಲ್ಲರೂ ಸೇವೆಗೆ ಮರಳಬೇಕು" ಎಂದು ಮನವಿ ಮಾಡಿದ್ದರು.
ಈ ಬೆನ್ನಲ್ಲೀಗ ಮಮತಾ ಅವರ ಮನವಿಗೆ ಕಿರಿಯ ವೈದ್ಯರು ಸ್ಪಂದಿಸಿದ್ಧಾರೆ. ಸಿಎಂ ನಮ್ಮ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂಬ ನಂಬಿಕೆ ಇದೆ. ನಾವು ಕೂಡ ಮಾತುಕತೆಗೆ ಮುಂದಾಗಿದ್ದೇವೆ. ಮಾಧ್ಯಮದವರ ಸಮ್ಮುಖದಲ್ಲೇ ಚರ್ಚೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.