ನವದೆಹಲಿ,ಜೂ 17(Daijiworld News/MSP): ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ನೂತನ ಸರ್ಕಾರದ ಪ್ರಥಮ ಲೋಕಸಭಾ ಅಧಿವೇಶನ ಇಂದು ( ಜೂನ್ 17 ರ ಸೋಮವಾರ ) ಆರಂಭವಾಗುತ್ತಿದ್ದು ಈ ಸಾರಿಯ ಅಧಿವೇಶನದಲ್ಲಿ ನೂತನ ಸಂಸದರ ಪ್ರಮಾಣ, ಸ್ಪೀಕರ್ ಆಯ್ಕೆ ಹಾಗೂ ಬಜೆಟ್ ಮಂಡನೆ ನಡೆಯಬೇಕಿವೆ. ಇದರೊಂದಿಗೆ ಕಾರ್ಮಿಕ ಸುಧಾರಣೆಗಳು, ತ್ರಿವಳಿ ತಲಾಖ್ ಸೇರಿದಂತೆ ಹಲವು ಮಸೂದೆಗಳು ಅಂಗೀಕಾರವಾಗುವ ನಿರೀಕ್ಷೆ ಇದೆ.
ಭಾನುವಾರ ಸುಗಮ ಕಲಾಪಕ್ಕಾಗಿ ಪ್ರಧಾನಿಯವರು ಸರ್ವಪಕ್ಷ ಸಭೆ ಮತ್ತು ಬಿಜೆಪಿ ಸಂಸದೀಯ ಪಕ್ಷದ ಸಭೆ ಹಾಗೂ ಎನ್ ಡಿಎ ಮೈತ್ರಿಕೂಟಗಳ ಸಭೆಯನ್ನು ಕರೆದಿದ್ದರು. ಇಲ್ಲಿ ಪ್ರಧಾನಿ ಸರ್ಕಾರದ ಎಲ್ಲಾ ಪಾಲುದಾರರು ಒಗ್ಗೂಡುವಿಕೆಯಿಂದ ಕೆಲಸ ಮಾಡುವಂತೆ ಕರೆ ನೀಡಿದರೆ ವಿರೋಧ ಪಕ್ಷಗಳ ನಾಯಕರು ನಿರುದ್ಯೋಗ ಸಮಸ್ಯೆ, ಜಮ್ಮು-ಕಾಶ್ಮೀರ ಚುನಾವಣೆ, ರೈತರ ಸಮಸ್ಯೆಗಳು, ಬರಗಾಲ ಮೊದಲಾದ ವಿಷಯಗಳ ಬಗ್ಗೆ ಮಾತನಾಡಿದರು.
ಇನು ಜೂನ್ 19 ರಂದು ಒಂದು ದೇಶದ, ಒಂದು ಚುನಾವಣೆ ಮತ್ತು ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನಾಚರಣೆ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಪ್ರಧಾನಿ ಎಲ್ಲ ಪ್ರತಿಪಕ್ಷಗಳ ನಾಯಕರ ಜತೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಸಂಸತ್ತಿನಲ್ಲಿ ಮೊದಲ ದಿನ ಇಂದು ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಮಾಡಲಿದ್ದಾರೆ.