ಬೆಂಗಳೂರು, ಜೂ 17(Daijiworld News/MSP): ರಾಜ್ಯ ಸರ್ಕಾರ ರಾತ್ರೋ ರಾತ್ರಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದು, ರಾಜ್ಯ ಸರ್ಕಾರ 19 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ಟಿ. ಸುನೀಲ್ ಕುಮಾರ್ ಜಾಗಕ್ಕೆ ನಗರ ಸಿಸಿಬಿ ಹೆಚ್ಚುವರಿ ಆಯುಕ್ತರಾಗಿದ್ದ ಅಲೋಕ್ ಕುಮಾರ್ರನ್ನು ನೇಮಿಸಲಾಗಿದೆ. ಈ ಮೊದಲು ಐಜಿಪಿ ಆಗಿದ್ದ ಅಲೋಕ್ಗೆ ಎಡಿಜಿಪಿಯಾಗಿ ಬಡ್ತಿ ನೀಡಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ನೇಮಕ ಮಾಡಲಾಗಿದೆ. ಟಿ. ಸುನಿಲ್ ಕುಮಾರ್ ಅವರನ್ನು ನೇಮಾಕಾತಿ ವಿಭಾಗ ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಅಮ್ರಿತ್ ಪೌಲ್ ಪೂರ್ವ ವಿಭಾಗ ಐಜಿಪಿ ಆಗಿ ನೇಮಕ ಮಾಡಲಾಗಿದೆ.
ಬೆಂಗಳೂರು ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಉಮೇಶ್ ಕುಮಾರ್, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿಕೆ ಸಿಂಗ್ರನ್ನು ಗೃಹ ಇಲಾಖೆಯ ಕಾರ್ಯದರ್ಶಿ (PCAS)ಯಾಗಿ ನೇಮಿಸಲಾಗಿದೆ. ಬೆಂಗಳೂರು ಆಂತರಿಕ ಭದ್ರತೆಯ ಐಜಿಪಿಯಾಗಿ ಸೌಮೆಂದು ಮುಖರ್ಜಿ, ದಕ್ಷಿಣ ವಲಯ ಐಜಿಪಿ ಆಗಿ ರಾಘವೇಂದ್ರ ಸುಹಾಸ್, ಸಿಸಿಬಿ ಮುಖ್ಯಸ್ಥರಾಗಿ ರವಿಕಾಂತೇ ಗೌಡ ವರ್ಗಾವಣೆಗೊಂಡಿದ್ದಾರೆ.
ನಾಗರಿಕ ರಕ್ಷಣೆ ಮತ್ತು ಗೃಹ ರಕ್ಷಕ ದಳ ವಿಭಾಗದ ಎಸ್ಪಿ ಆಗಿ ಅಮಿತ್ ಸಿಂಗ್, ಎಸಿಬಿ ಎಎಸ್ಪಿ ಆಗಿ ರಾಮ್ ನಿವಾಸ್, ರೈಲ್ವೆ ಎಸ್ಪಿ ಆಗಿ ಎಂ.ಎನ್. ಅನುಚೇತ್, ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ಬಿ ರಮೇಶ್, ಸಿಐಡಿ ಎಸ್ಪಿ ಆಗಿ ರವಿ ಡಿ ಚನ್ನಣ್ಣನವರ್, ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ ಆಗಿ ಡಾ. ಭೀಮಾಶಂಕರ್ ಎಸ್ ಗುಳೇದ್, ಮೈಸೂರು ಎಸ್ಪಿ ಆಗಿ ಸಿ.ಬಿ. ರಿಶ್ಯಂತ್ ವರ್ಗಾವಣೆ ಗೊಂಡಿದ್ದಾರೆ.
ಕೆಎಸ್ಆರ್ಪಿ ನಾಲ್ಕನೇ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದ ಮೊಹಮದ್ ಸುಜೀತಾ ಕೋಲಾರ ಎಸ್ಪಿ ಆಗಿ, ಟಿಪಿ ಶಿವಕುಮಾರ್ ಬೆಂಗಳೂರು ಗ್ರಾಮಾಂತರ ಎಸ್ಪಿ ಆಗಿ, ಎನ್ ವಿಷ್ಣುವರ್ಧನ ಬೆಂಗಳೂರು ಅಡಳಿತ ಡಿಸಿಪಿ ಆಗಿ, ಕಲಾಕೃಷ್ಣ ಸ್ವಾಮಿ ಎಫ್ಎಸ್ ಎಲ್ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ.