ಮೈಸೂರು, ಜೂ 17(Daijiworld News/MSP): ಭಾನುವಾರ ಬೆಳಗ್ಗೆ ನಗರದ ದೇವರಾಜ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿತ್ತು. ರಾಜವಂಶಸ್ಥ ಯದುವೀರ್ ಒಡೆಯರ್ ನಗರದ ದೇವರಾಜ ಮಾರುಕಟ್ಟೆಗೆ ತಮ್ಮ ಪತ್ನಿ ತ್ರಿಷಿಕಾ ಅವರ ಜೊತೆ ಭೇಟಿ ನೀಡಿದ್ದು ಮಾತ್ರವಲ್ಲದೆ ಮಹಾರಾಣಿ ಖುದ್ದು ಸೊಪ್ಪು ತರಕಾರಿ ಖರೀದಿಸಿ ಎಲ್ಲರನ್ನು ಚಕಿತಗೊಳಿಸಿದರು.
ಮಾರುಕಟ್ಟೆ ಕಟ್ಟಡ ಕೆಡುವ ವಿಚಾರದಲ್ಲಿ ರಾಜಮನೆತನ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಕಟ್ಟಡದ ಸ್ಥಿತಿ ತಿಳಿಯಲು ಪತ್ನಿ ಸಮೇತರಾಗಿ ಯದುವೀರ್ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಮಾರುಕಟ್ಟೆಯಲ್ಲಿ ಯದುವೀರ್ ದಂಪತಿ ಕಂಡು ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಅಚ್ಚರಿಗೊಂಡರು.
ಜನಸಾಮಾನ್ಯರಂತೆ ಮಾರುಕಟ್ಟೆಯಲ್ಲಿ ಓಡಾಡಿದ ಯದುವೀರ್ ದಂಪತಿ, ವ್ಯಾಪಾರಿಗಳ ಬಳಿ ಮಾತುಕತೆ ನಡೆಸಿ ಕಟ್ಟಡದ ಬಗ್ಗೆ ಮಾಹಿತಿ ಪಡೆದರು. ಮಾರುಕಟ್ಟೆಯ ವ್ಯಾಪಾರಿಗಳ ಅಂಗಡಿಯ ಮುಂದೆ ಕುಳಿತು ಅವರ ಬಳಿ ಜತೆ ಸಮಾಲೋಚನೆ ನಡೆಸಿದರು. ದಂಪತಿ ಮಾರುಕಟ್ಟೆಯಲ್ಲಿ ಸಾಗುತ್ತಿದ್ದರೆ ವ್ಯಾಪಾರಿಗಳು ಸ್ವಪ್ರೇರಣೆಯಿಂದ ಎದ್ದು ಮಹಾರಾಜ ಮಹಾರಾಣಿಗೆ ಎದ್ದು ನಿಂತು ಗೌರವ ತೋರಿಸಿದ್ದು ವಿಶೇಷವಾಗಿತ್ತು.
ಮಹಾರಾಣಿ ತ್ರಿಷಿಕಾ ಅವರು ಮಾರುಕಟ್ಟೆಯಲ್ಲಿ ತರಕಾರಿ, ಸೊಪ್ಪುಗಳನ್ನು ಖರೀದಿಸಿದರು. ಜತೆಗೆ ನೇರಳೆ ಹಣ್ಣು, ನಂಜನಗೂಡಿನ ರಸಬಾಳೆಯನ್ನು ಖರೀದಿಸಿದರು. ಆದರೆ ವ್ಯಾಪಾರಿಗಳು ದುಡ್ಡು ಪಡೆಯಲು ಎಲ್ಲೆಡೆ ಹಿಂದೇಟು ಹಾಕಿ ಕೈ ಮುಗಿದು ಹಣವನ್ನು ನಯವಾಗಿ ನಿರಾಕರಿಸಿದರು. ಆದರೆ ಇದಕ್ಕೆ ಮಹಾರಾಜ ದಂಪತಿ ಬಲವಂತವಾಗಿಯೇ ಹಣ ನೀಡಿ ತರಕಾರಿ, ಸೊಪ್ಪು, ಹಣ್ಣುಗಳನ್ನು ಖರೀದಿಸಿದರು.
ದೇವರಾಜ ಮಾರುಕಟ್ಟೆಯಲ್ಲಿ ಸುತ್ತುಹಾಕಿ ವ್ಯಾಪಾರ ಮುಗಿಸಿಕೊಂಡು ಹೊರ ಬಂದ ಯದುವೀರ್ ದಂಪತಿಗಳು ಬಳಿಕ ನೇರವಾಗಿ ಗುರು ಸ್ವೀಟ್ ಮಾರ್ಟ್ ಗೆ ಭೇಟಿ ನೀಡಿದರು. ಅಲ್ಲಿ ದೊರಕುವ ಪ್ರಸಿದ್ಧ ಮೈಸೂರ್ ಪಾಕ್ ಖರೀದಿಸಿದರು. ನಂತರ ಕಾರಿನ ಬಳಿ ತೆರಳಿದಾಗ ಮಾರುಕಟ್ಟೆ ಸಮೀಪ ನೆರದಿದ್ದ ಅನೇಕರು ಆಗಮಿಸಿ ಯದುವೀರ್ ಕಾಲಿಗೆ ನಮಸ್ಕರಿಸಿದರು.
ಮಾರುಕಟ್ಟೆಗೆ ಸುತ್ತು ಹೊಡೆದು, ವ್ಯಾಪಾರಿಗಳ ಬಳಿ ಮಾತುಕತೆ ನಡೆಸಿ ಸರಳತೆ ಮೆರೆದೆ ರಾಜವಂಶಸ್ಥರ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.