ಬೆಂಗಳೂರು, ಜೂ 17(Daijiworld News/MSP): ನಿರ್ಮಾಣ ಹಂತದಲ್ಲಿ ನೀರಿನ ಟ್ಯಾಂಕ್ ನ ಸೆಂಟ್ರಿಂಗ್ ಕುಸಿದ ಪರಿಣಾಮ ಮೂವರು ಮೃತಪಟ್ಟು 23 ಕ್ಕೂ ಹೆಚ್ಚುಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಲೇಔಟ್ ನಲ್ಲಿ ನಡೆದಿದೆ. ಮೃತಪಟ್ಟವರೆಲ್ಲರೂ ಪಶ್ಚಿಮ ಬಂಗಾಳದ ಮೂಲದವರಾಗಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು , ರಕ್ಷಣಾ ಕಾರ್ಯಾಚರಣೆಗೆ ಚುರುಕು ಮುಟ್ಟಿಸಲಾಗಿದೆ. ಅವಶೇಷಗಳಡಿ ಇನ್ನೂ 10 ಮಂದಿ ಸಿಲುಕಿರೋ ಶಂಕೆ ವ್ಯಕ್ತ ವಾಗಿದೆ.
ಕಾಮಗಾರಿ ವೇಳೆ ನೀರು ಶುದ್ದೀಕರಣ ಘಟಕದ ಟ್ಯಾಂಕರ್ ನ ಸೆಂಟ್ರಿಂಗ್ ಗೆ ಅಳವಡಿಸಿದ್ದ ಕಂಬ ಕುಸಿದು ಅವಘಡ ಸಂಭವಿಸಿದೆ, 110 ಎಂಎಲ್ ಡಿ ಸಾಮರ್ಥ್ಯದ ಟ್ಯಾಂಕ್ ಇದಾಗಿದ್ದು, ಒಳಗಡೆ 8-12 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ರಕ್ಷಿಸಿದ ಮೂವರು ಗಾಯಾಳುಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಎನ್ ಡಿಆರ್ ಎಫ್ ತಂಡ ಧಾವಿಸಿದ್ದು ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದೆ.