ಚಿಕ್ಕಮಗಳೂರು,ಏ.10(DaijiworldNews/AK): ಕರ್ನಾಟಕದಲ್ಲಿ ನುಡಿದಂತೆ ನಡೆದ ಸರಕಾರ ಇಲ್ಲ; ಇದು ಮುಗ್ಗರಿಸಿ ಬಿದ್ದ ಸರಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು.

ಬಿಜೆಪಿ ಜನಾಕ್ರೋಶ ಯಾತ್ರೆಯ ಸಂಬಂಧ ಇಂದು ಇಲ್ಲಿ ಏರ್ಪಡಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ತಮ್ಮದು ನುಡಿದಂತೆ ನಡೆದ ಸರಕಾರ ಎಂದು ಜಾಹೀರಾತು ಮೂಲಕ ತಿಳಿಸುತ್ತಾರೆ. ಆದರೆ, ಅವರು ನುಡಿದಂತೆ ನಡೆದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜನಸಾಮಾನ್ಯರು ಬಳಸುವ 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ ಸರಕಾರ ಇದು. ಸಿದ್ದರಾಮಯ್ಯನವರ ಸರಕಾರವು ಕಳೆದ 20 ತಿಂಗಳಿನಲ್ಲಿ ಹಾಲಿನ ದರವನ್ನು 9 ರೂ. ಹೆಚ್ಚಿಸಿದೆ. ಗ್ರಾಮೀಣ ಭಾಗದ ಬಡವರು ಹಾಲನ್ನು ಖರೀದಿಸಿ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡಲು ಕಷ್ಟವಾಗಿದೆ ಎಂದು ಆಕ್ಷೇಪಿಸಿದರು.
ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಎಂದರು. ಇದೀಗ ಸಾವಿರಾರು ಗ್ರಾಮೀಣ ಬಸ್ಗಳು ಓಡಾಟ ನಿಲ್ಲಿಸಿದ್ದು, ರೈತರು, ಗ್ರಾಮೀಣ ಭಾಗದ ಮಕ್ಕಳು ಶಾಲೆಗೆ, ಕಾಲೇಜಿಗೆ ಹೋಗಲು ಪರದಾಡುವ ದುಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಒಂದೆಡೆ ಡೀಸೆಲ್ ಬೆಲೆ ಹೆಚ್ಚಿಸಿದ್ದಾರೆ. ರೈತರು ಟ್ರಾನ್ಸ್ಫಾರ್ಮರ್ ಹಾಕಿಸಿಕೊಳ್ಳಲು ಹಿಂದೆ ಬಿಜೆಪಿ ಸರಕಾರ ಇದ್ದಾಗ 25 ಸಾವಿರ ಖರ್ಚು ಮಾಡಬೇಕಿದ್ದರೆ, ಈಗ ಸಿದ್ದರಾಮಯ್ಯನವರ ರೈತಪರ ಎನ್ನುವ ಸರಕಾರ ಬಂದ ಬಳಿಕ 2.5 ರಿಂದ 3 ಲಕ್ಷ ಹಣವನ್ನು ರೈತರು ಕಟ್ಟಬೇಕಾಗಿದೆ ಎಂದು ಆರೋಪಿಸಿದರು.
ಸರಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಯ ದರ ಹೆಚ್ಚಿಸಿದ್ದಾರೆ. ಯಾರಾದರೂ ಮೃತಪಟ್ಟರೆ ಮರಣ ಪ್ರಮಾಣಪತ್ರ ಪಡೆಯುವ ಶುಲ್ಕವನ್ನೂ ಏರಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದಾರೆ. ಕಸದ ಮೇಲೂ ತೆರಿಗೆ ಹಾಕುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
3 ಕಾರಣಗಳಿಗೆ ಈ ಯಾತ್ರೆ ಆರಂಭಿಸಿದ್ದೇವೆ. ರಾಜ್ಯದಲ್ಲಿರುವ ಭ್ರಷ್ಟ ಜನವಿರೋಧಿ ಬೆಲೆ ಏರಿಕೆಯ ಸರಕಾರದ ವಿರುದ್ಧ, ಮುಸಲ್ಮಾನರ ಓಲೈಕೆಗಾಗಿ ಹಿಂದೂಗಳ ಅವಮಾನ ಮಾಡುತ್ತಿರುವುದು ಮತ್ತು ಅಹಿಂದ ಹೆಸರಿನಿಂದ ಅಧಿಕಾರಕ್ಕೆ ಬಂದು ಹಿಂದುಳಿದ ಸಮುದಾಯಗಳು, ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡಿಕೊಂಡ ಕಾಂಗ್ರೆಸ್ ಸರಕಾರದ ವಿರುದ್ಧ ಈ ಯಾತ್ರೆ ನಡೆದಿದೆ ಎಂದು ವಿವರಿಸಿದರು.