ಮಾವೆಲಿಕ್ಕರ, ಜೂ 17(Daijiworld News/MSP): ಮಹಿಳಾ ಪೇದೆ ಸೌಮ್ಯ ಪುಷ್ಪಾಕರನ್ ರನ್ನು (34) ಪೊಲೀಸ್ ಅಧಿಕಾರಿಯೊಬ್ಬ ಹರಿತ ಆಯುಧದಿಂದ ಹಲ್ಲೆ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿದ್ದು ಇದಕ್ಕೆ ಏಕಮುಖ ಪ್ರೇಮವೇ ಕಾರಣ ತನಿಖೆ ವೇಳೆ ಬಯಲಾಗಿದೆ.
ಘಟನೆ ವಿವರ:
ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಮಹಿಳಾ ಪೇದೆ ಸೌಮ್ಯ ಪುಷ್ಪಾಕರನ್ ಸಂಚಾರಿ ಪೊಲೀಸ್ ಸಿಬ್ಬಂದಿಯಾದ ಅಜಾಜ್ (33) ಕಾರಿನಲ್ಲಿ ಹಿಂಬಾಲಿಸಿ ಸೌಮ್ಯ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ. ಬಳಿಕ ಆಕೆಯ ಮೇಲೆ ಹರಿತ ಆಯುಧದಿಂದ ಹಲ್ಲೆ ನಡೆಸಿದ್ದ. ತಪ್ಪಿಸಿಕೊಳ್ಳಲು ಸಮೀಪದ ಮನೆಯೊಂದಕ್ಕೆ ತೆರಳಿದ ಸೌಮ್ಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಪರಿಣಾಮ ಸೌಮ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಪೊಲೀಸ್ ಅಧಿಕಾರಿ ಅಜಾಜ್ ಅವರ ವನ್ ವೇ ಲವ್ ಸ್ಟೋರಿ ಬಯಲಾಗಿದೆ. ಅಜಾಜ್ ಹಾಗೂ ಸೌಮ್ಯಾ ಅವರು ಮೂರು ವರ್ಷಗಳಿಂದಲೂ ಸ್ನೇಹಿತರಾಗಿದ್ದರು. ಆದರೆ ಅಜಾಜ್ ಸ್ನೇಹ ಕುಟುಂಬ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮನಗಂಡ ಸೌಮ್ಯಾ, ಅಜಾಜ್ರಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದ್ದರು.
ಸೌಮ್ಯಾ ಅವರು ವಿವಾಹಿತರಾಗಿದ್ದು, ಪತಿ ವಿದೇಶದಲ್ಲಿದ್ದಾರೆ. ಮಾತ್ರವಲ್ಲದೆ ಇವರು ಮೂವರು ಮಕ್ಕಳ ತಾಯಿಯಾಗಿದ್ದಾರೆ. ಏಕಮುಖವಾಗಿ ಸೌಮ್ಯ ಅವರನ್ನು ಪ್ರೀತಿಸುತ್ತಿದ್ದ, ಅಜಾಜ್ ಸೌಮ್ಯ ಬಳಿ ಪತಿ ಮಕ್ಕಳನ್ನು ತೊರೆದು ತನ್ನನ್ನು ವಿವಾಹವಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಇದನ್ನು ತಿರಸ್ಕರಿಸಿದ್ದ ಸೌಮ್ಯ, ಅಜಾಜ್ ಕರೆ ಹಾಗೂ ವಾಟ್ಸಾಪ್ನ್ನು ಬ್ಲಾಕ್ ಮಾಡಿದ್ದರು. ಸೌಮ್ಯ ಈ ವಿಚಾರಗಳನ್ನು ತನ್ನ ತಾಯಿಯೊಂದಿಗೆ ಹಂಚಿಕೊಂಡಿದ್ದರು. ಇದರಿಂದ ಕುಪಿತನಾಗಿದ್ದ ಆರೋಪಿ ಸೌಮ್ಯ ಅವರನ್ನು ಹತ್ಯೆ ಮಾಡಿ ತಾನು ಸಾಯಲು ನಿರ್ಧರಿಸಿದ್ದ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೌಮ್ಯ ಅವರ ತಾಯಿ " ಸೌಮ್ಯಾ ಪೊಲೀಸ್ ಇಲಾಖೆಗೆ ನೇಮಕವಾಘಿ ತರಬೇತಿಗೆಂದು ತ್ರಿಶೂರಿನ ಪೊಲೀಸ್ ಅಕಾಡೆಮಿಗೆ ತೆರಳಿದ್ದಾಗ ಅಜಾಜ್ ಪರಿಚಯವಾಗಿದ್ದ. ಇವರಿಬ್ಬರ ನಡುವೆ ಹಣದ ವ್ಯವಹಾರವು ನಡೆದಿತ್ತು. ಅಜಾಜ್ ಈ ಹಿಂದೆಯೂ ಸೌಮ್ಯಾಳ ಕೊಲೆಗೆ ಪ್ರಯತ್ನಿಸಿದ್ದ. ಪೆಟ್ರೋಲ್ ಸುರಿದು, ಬೂಟಿನಿಂದ ಹೊಡೆದಿದ್ದ. ಹೀಗಾಗಿ ನಾನು ಆತನೊಂದಿಗೆ ಮಾತನಾಡಿ ಈ ಸಮಸ್ಯೆ ಬಗೆಹರಿಸಲು ನಿರ್ಧರಿಸಿ ಮಗಳಲ್ಲಿ ತಿಳಿಸಿದಾಗ ಆಕೆ ತಮ್ಮಿಬ್ಬರ ನಡುವೆ ಬೇರೊಬ್ಬರು ಪ್ರವೇಶಿಸಿದರೆ ಸಮಸ್ಯೆ ಪರಿಹಾರ ಕಾಣುವ ಬದಲು ಮತ್ತಷ್ಟು ಉಲ್ಭಣವಾಗುತ್ತದೆ ಎಂಬ ಭಯದಿಂದ ನನ್ನನ್ನು ಆ ಪ್ರಯತ್ನದಲ್ಲಿ ಮುಂದುವರಿಯದಂತೆ ತಡೆದಿದ್ದಳು. ಆ ಬಳಿಕ ಎಲ್ಲವೂ ತಹಬದಿಗೆ ಬಂದಿತ್ತು, ಎಂದು ಹೇಳಿದ್ದಾರೆ.