ಪಾಟ್ನಾ, ಏ.11 (DaijiworldNews/AA): 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್ ಉಗ್ರ ತಹವ್ವೂರ್ ರಾಣಾನನ್ನು ಮರಳಿ ಕರೆತಂದ ಕ್ರೆಡಿಟ್ ದೇಶಕ್ಕೆ ಸಲ್ಲುತ್ತದೆ. ಯಾರೂ ವೈಯಕ್ತಿಕವಾಗಿ ಕ್ರೆಡಿಟ್ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.

ರಾಣಾ ಹಸ್ತಾಂತರ ವಿಚಾರ ಕುರಿತು ಮಾತನಾಡಿದ ಅವರು, ರಾಣಾನನ್ನ ತಕ್ಷಣವೇ ಗಲ್ಲಿಗೇರಿಸಬೇಕು. ಆದ್ರೆ ಬಿಹಾರ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಗಲ್ಲಿಗೇರಿಸಲಿದೆ. ರಾಣಾನನ್ನು ಭಾರತಕ್ಕೆ ಕರೆತರಲು 16 ವರ್ಷ ಬೇಕಾಯಿತು. ಆದ್ರೆ ಅವನನ್ನು ಹಸ್ತಾಂತರಿಸುವ ಪ್ರಕ್ರಿಯೆ ಕಾಂಗ್ರೆಸ್ ಆಡಳಿತದಲ್ಲೇ ಪ್ರಾರಂಭವಾಯಿತು ಎಂದಿದ್ದಾರೆ.
ತಹವ್ವೂರ್ ರಾಣಾ ಭಾರತಕ್ಕೆ ಹಸ್ತಾಂತರಿಸಲಾದ ಮೊದಲ ಆರೋಪಿಯಲ್ಲ. ಇದಕ್ಕೂ ಮುನ್ನ 1993ರ ಸರಣಿ ಸ್ಫೋಟದ ಆರೋಪಿ ಅಬು ಸಲೇಂನನ್ನು ಕೂಡ ಭಾರತಕ್ಕೆ ಹಸ್ತಾಂತರಿಸಲಾಗಿತ್ತು ಎಂದು ಹೇಳಿದರು.
ಉಗ್ರ ತಹವ್ವೂರ್ ರಾಣಾನನ್ನು ಕೊನೆಗೂ ಭಾರತಕ್ಕೆ ಕರೆತರಲಾಗಿದೆ. ಈಗಾಗಲೇ ರಾಣಾನನ್ನ ಕೋರ್ಟ್ 18 ದಿನಗಳ ಕಾಲ ಎನ್ಐಎ ಕಸ್ಟಡಿಗೆ ನೀಡಿದ್ದು, ಎನ್ಐಎ ಮುಂದಿನ ವಿಚಾರಣೆ ನಡೆಸಲಿದೆ.