ಯಲ್ಲಾಪುರ, ಏ.11(DaijiworldNews/AK) :ರಾಜ್ಯದ ಕಾಂಗ್ರೆಸ್ ಪಕ್ಷದ್ದು ಅತ್ಯಂತ ಭ್ರಷ್ಟ ಸರಕಾರ ಎಂದು ನಾವು ಹೇಳಿಲ್ಲ. ಅದೇ ಪಕ್ಷದ ಶಾಸಕ, ಮುಖ್ಯಮಂತ್ರಿಗಳ ಸಲಹೆಗಾರ ಬಸವರಾಜ ರಾಯರೆಡ್ಡಿಯವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಲ್ಲಿ ಇಂದು ಜನಾಕ್ರೋಶ ಯಾತ್ರೆಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನರು ಭಾರಿ ಸಂಖ್ಯೆಯಲ್ಲಿ ಸೇರಿದ್ದರ ಕುರಿತು ಮೆಚ್ಚುಗೆ ಸೂಚಿಸಿದರು. ಬೆಲೆ ಏರಿಕೆ- ಭ್ರಷ್ಟಾಚಾರದ ಕಾಂಗ್ರೆಸ್ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸಲು ನಾವು ಹೊರಟಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸಲ್ಮಾನರನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ಸರಕಾರಿ ಕಾಮಗಾರಿಗಳಲ್ಲಿ ಶೇ 4 ರಷ್ಟು ಮೀಸಲಾತಿ ನೀಡಿದ್ದಾರೆ. ಇದು ಹಿಂದೂಗಳಿಗೆ ಅವಮಾನ ಮಾಡುವ ಕ್ರಮ ಎಂದು ಟೀಕಿಸಿದರು.
ದಲಿತರ ಅಭ್ಯುದಯಕ್ಕೆ ಬಳಕೆ ಆಗಬೇಕಿದ್ದ 38 ಸಾವಿರ ಕೋಟಿ ಎಸ್ಇಟಿ, ಟಿಎಸ್ಪಿ ಹಣವನ್ನು ಸಿದ್ದರಾಮಯ್ಯನವರು ಬೇರೆ ಕಡೆ ವರ್ಗಾವಣೆ ಮಾಡಿದ್ದಾರೆ; ಅಲ್ಲೂ ಕೂಡ ಭ್ರಷ್ಟಾಚಾರ ನಡೆಯುತ್ತಿದೆ. ಇದರ ವಿರುದ್ಧ ಜನಾಕ್ರೋಶ ವ್ಯಕ್ತಪಡಿಸುತ್ತಿದ್ದೇವೆ ಎಂದು ವಿವರಿಸಿದರು.
ಬೆಲೆ ಏರಿಕೆಗೆ ವಸ್ತು ಶಿಫಾರಸು ಮಾಡುವ ಸಮಿತಿ..
20 ತಿಂಗಳಲ್ಲಿ ಸಿದ್ದರಾಮಯ್ಯನವರು ಗರಿಷ್ಠ ಬೆಲೆ ಏರಿಕೆ ಮಾಡಿದ್ದಾರೆ. ಇವರು ಒಂದು ತಜ್ಞರ ಸಮಿತಿ ನೇಮಿಸಿಕೊಂಡಿದ್ದು, ಅದು ಅಭಿವೃದ್ಧಿ ಕಡೆ ಗಮನ ಕೊಡುವಂಥದ್ದಲ್ಲ. ಯಾವ ಅಗತ್ಯ ವಸ್ತುಗಳ ಮೇಲೆ ಬೆಲೆ ಹೆಚ್ಚಿಸಬಹುದೆಂದು ಅದು ಸಲಹೆ ನೀಡುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಅವರು ದೂರಿದರು.
ಗ್ಯಾರಂಟಿ ಹೆಸರು ಹೇಳಿಕೊಂಡು ಕಾಂಗ್ರೆಸ್ಸಿಗರು ಜನರ ಕಣ್ಣಿಗೆ ಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಕಳೆದ 20 ತಿಂಗಳಲ್ಲಿ 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ಸಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭಾ ಚುನಾವಣೆಗೆ ಮೊದಲು ಕೃಷ್ಣೆಯ ಕಡೆಗೆ ಪಾದಯಾತ್ರೆ ಮಾಡಿದ್ದರು. ಆದರೆ, ಅಧಿಕಾರ ಬಂದರೂ ಒಂದು ರೂಪಾಯಿಯನ್ನು ನೀರಾವರಿ ಯೋಜನೆಗೆ ನೀಡಿಲ್ಲ. ಡಿ.ಕೆ.ಶಿವಕುಮಾರರು ಮೇಕೆದಾಟು ಪಾದಯಾತ್ರೆ ಮಾಡಿದರು. ಅಧಿಕಾರಕ್ಕೆ ಬರುವವರೆಗೆ ಮಾತ್ರ ಎಂಬಂತಾಯಿತು. ಅಧಿಕಾರ ಸಿಕ್ಕಿದ ಬಳಿಕ ಮೇಕೆದಾಟು ಮರೆತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.