ಬೆಂಗಳೂರು, ಏ.12 (DaijiworldNews/AA): ಕರ್ನಾಟಕದಾದ್ಯಂತ ಇಂದಿನಿಂದ ಏ.18ರವರೆಗೆ ಭಾರೀ ಗಾಳಿ, ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ಹೆಚ್ಚಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಕಳೆದ ವಾರ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸರಾಸರಿ ನಿರೀಕ್ಷಿತ ಮಳೆ 4.7 ಮಿ.ಮೀ ಆಗಿದ್ದರೂ, ರಾಜ್ಯದಲ್ಲಿ 19.1 ಮಿ.ಮೀ ಮಳೆ ದಾಖಲಾಗಿದೆ. ಕರಾವಳಿ ಪ್ರದೇಶದಲ್ಲಿ, ಸಾಮಾನ್ಯ 4.7 ಮಿ.ಮೀ ಬದಲಿಗೆ 18.1 ಮಿ.ಮೀ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿ 3.8 ಮಿ.ಮೀ ಮಳೆಯಾಗುತ್ತಿದ್ದು, 13.9 ಮಿ.ಮೀ ದಾಖಲಾಗಿದೆ. ದಕ್ಷಿಣ ಒಳನಾಡಿನಲ್ಲಿ 5.5 ಮಿ.ಮೀ ಸರಾಸರಿಗೆ ಹೋಲಿಸಿದರೆ 23.8 ಮಿ.ಮೀ ಮಳೆಯಾಗಿದೆ.
ಕರ್ನಾಟಕದ 25 ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದ್ದು, ಮೂರು ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದೆ. ಇನ್ನು ಒಂದು ಜಿಲ್ಲೆಯಲ್ಲಿ ಕಡಿಮೆ ಮಳೆಯಾಗಿದ್ದು, ಮತ್ತೊಂದು ಜಿಲ್ಲೆಯಲ್ಲಿ ಯಾವುದೇ ಮಳೆಯಾಗಿಲ್ಲ.
ಏಪ್ರಿಲ್ 12 ರಿಂದ 18 ರವರೆಗೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.