ಅಮೃತಸರ, ಏ.12(DaijiworldNews/TA): ಅಮೃತಸರದಲ್ಲಿ ಶನಿವಾರ ನಡೆದ ಶಿರೋಮಣಿ ಅಕಾಲಿ ದಳದ ಸಾಮಾನ್ಯ ಪ್ರತಿನಿಧಿ ಅಧಿವೇಶನದಲ್ಲಿ ಸುಖಬೀರ್ ಸಿಂಗ್ ಬಾದಲ್ ಅವರನ್ನು ಮತ್ತೊಮ್ಮೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಬಾದಲ್ ಅವರ ಹೆಸರನ್ನು ಪಕ್ಷದ ಕಾರ್ಯಾಧ್ಯಕ್ಷ ಬಲ್ವಿಂದರ್ ಸಿಂಗ್ ಭುಂದರ್ ಪ್ರಸ್ತಾಪಿಸಿದರೆ, ಪಕ್ಷದ ನಾಯಕ ಪರಮಜಿತ್ ಸಿಂಗ್ ಸರ್ನಾ ಅದನ್ನು ಅನುಮೋದಿಸಿದರು. ದರ್ಬಾರ್ ಸಾಹಿಬ್ ಸಂಕೀರ್ಣದಲ್ಲಿರುವ ತೇಜ ಸಿಂಗ್ ಸಮುಂದಾರಿ ಸಭಾಂಗಣದಲ್ಲಿ ಎಸ್ಎಡಿ ನೂತನ ಅಧ್ಯಕ್ಷರ ಆಯ್ಕೆ ಅಧಿವೇಶನ ನಡೆಯಿತು.
ಬಾದಲ್ ಅವರ ಪತ್ನಿ ಮತ್ತು ಬಟಿಂಡಾ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್, ಮಾಜಿ ಸಚಿವರಾದ ಬಿಕ್ರಮ್ ಸಿಂಗ್ ಮಜಿಥಿಯಾ, ದಲ್ಜಿತ್ ಸಿಂಗ್ ಚೀಮಾ, ಹಿರಿಯ ನಾಯಕ ಮಹೇಶ್ ಇಂದರ್ ಸಿಂಗ್ ಗ್ರೆವಾಲ್ ಸೇರಿದಂತೆ ಹಲವಾರು ಹಿರಿಯ ಪಕ್ಷದ ನಾಯಕರು ಉಪಸ್ಥಿತರಿದ್ದರು.
2007 ರಿಂದ 2017 ರವರೆಗೆ ಎಸ್ಎಡಿ ಮತ್ತು ಅದರ ಸರ್ಕಾರ ಮಾಡಿದ "ತಪ್ಪುಗಳಿಗಾಗಿ" ಅಕಾಲ್ ತಖ್ತ್ ಅವರನ್ನು 'ತಂಖೈಯಾ' (ಧಾರ್ಮಿಕ ದುಷ್ಕೃತ್ಯದ ತಪ್ಪಿತಸ್ಥ) ಎಂದು ಘೋಷಿಸಿದ ನಂತರ, ನವೆಂಬರ್ 16, 2024 ರಂದು ಬಾದಲ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.