ಶಿವಮೊಗ್ಗ, ಏ.12 (DaijiworldNews/AK): ಸುಮಾರು 50ರಷ್ಟು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ ರಾಜ್ಯದ ಕಾಂಗ್ರೆಸ್ ಸರಕಾರವು ಸರಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲದ ಪರಿಸ್ಥಿತಿಗೆ ಬಂದು ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಇಂದು ಜನಾಕ್ರೋಶ ಯಾತ್ರೆಯ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸಲ್ಮಾನರನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ಸರಕಾರಿ ಕಾಮಗಾರಿಗಳಲ್ಲಿ ಶೇ 4 ರಷ್ಟು ಮೀಸಲಾತಿ ನೀಡಿದ್ದಾರೆ. ಇದು ಹಿಂದೂಗಳಿಗೆ ಅವಮಾನ ಮಾಡುವ ಕ್ರಮ ಎಂದು ಟೀಕಿಸಿದರು.
ಮುಸ್ಲಿಂ ಯುವಜನರು ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳುವುದಾದರೆ 20 ಲಕ್ಷದ ಬದಲು 30 ಲಕ್ಷ ಕೊಡುತ್ತಿದ್ದಾರೆ. ನಿಮಗೆ ಹಿಂದೂಗಳು ಕಾಣುವುದಿಲ್ಲವೇ? ನಮ್ಮ ಹಿಂದೂಗಳು ನಿಮಗೆ ಮಾಡಿದ ಅನ್ಯಾಯವಾದರೂ ಏನು ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಮುಸಲ್ಮಾನರನ್ನು ಓಲೈಸುವ ಮತ್ತು ಹಿಂದೂಗಳಿಗೆ ಅವಮಾನ ಮಾಡುವ ರಾಜಕೀಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದಕ್ಕಾಗಿ ಬಿಜೆಪಿ ಜನಾಕ್ರೋಶ ಯಾತ್ರೆ ಪ್ರಾರಂಭಿಸಿದೆ ಎಂದು ನುಡಿದರು.
ಹಾಲಿನ ದರ 9 ರೂ. ಹೆಚ್ಚಿಸಿದ್ದು, ಬಡಜನರು ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡಲು ಸಾಧ್ಯ ಆಗುತ್ತಿಲ್ಲ. ಕಾಂಗ್ರೆಸ್ ಸರಕಾರವು ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ರೈತರು ಟ್ರಾನ್ಸ್ಫಾರ್ಮರ್ ಹಾಕಿಸಿಕೊಳ್ಳಲು ಹಿಂದೆ ಬಿಜೆಪಿ ಸರಕಾರ ಇದ್ದಾಗ 25 ಸಾವಿರ ಖರ್ಚು ಮಾಡಬೇಕಿದ್ದರೆ, ಈಗ ಸಿದ್ದರಾಮಯ್ಯನವರ ರೈತಪರ ಎನ್ನುವ ಸರಕಾರ ಬಂದ ಬಳಿಕ 2.5 ರಿಂದ 3 ಲಕ್ಷ ಹಣವನ್ನು ರೈತರು ಕಟ್ಟಬೇಕಾಗಿದೆ ಎಂದು ಆಕ್ಷೇಪಿಸಿದರು. ದಲಿತರ ಅಭ್ಯುದಯಕ್ಕೆ ಬಳಕೆ ಆಗಬೇಕಿದ್ದ 38 ಸಾವಿರ ಕೋಟಿ ಎಸ್ಇಟಿ, ಟಿಎಸ್ಪಿ ಹಣವನ್ನು ಸಿದ್ದರಾಮಯ್ಯನವರು ದುರುಪಯೋಗ ಮಾಡುತ್ತಿದ್ದಾರೆ ಎಂದು ದೂರಿದರು.
ನರೇಂದ್ರ ಮೋದಿಯವರ ಕಳೆದ 10 ವರ್ಷಗಳ ದೇಶದ ಸಮರ್ಥ ಆಡಳಿತದ ಪರಿಣಾಮವಾಗಿ ಜಗತ್ತಿನ 5ನೇ ಪ್ರಮುಖ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ ಎಂದು ಅವರು ವಿವರಿಸಿದರು.