ತಿರುವನಂತಪುರಂ, ಜೂ 17(Daijiworld News/MSP): ಕರ್ನಾಟಕದ 'ಸಿಂಗಂ' ಎಂದೇ ಖ್ಯಾತಿ ಪಡೆದಿರುವ ಖಡಕ್ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಖಾಕಿ ಕಳಚಿ ಕಪ್ಪು ವಸ್ತ್ರ ಧರಿಸಿದ್ದಾರೆ.
ರಾಜೀನಾಮೆಯ ನಂತರ ಅವರ ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ, "ಕಳೆದ ವರ್ಷ ಕೈಲಾಸ ಸರೋವರಕ್ಕೆ ನಾನು ನೀಡಿದ ಭೇಟಿ ನನ್ನ ಜೀವನದ ಆದ್ಯತೆಗಳನ್ನು ಉತ್ತಮಗೊಳಿಸಲು ನೆರವಾಗುವಂತೆ ಕಣ್ಣು ತೆರೆಸಿತು. ಮಧುಕರ್ ಶೆಟ್ಟಿ ಅವರ ಸಾವು ನನ್ನದೇ ಬದುಕನ್ನು ಮರು ಪರೀಕ್ಷೆಗೆ ಒಳಪಡಿಸುವಂತೆ ಮಾಡಿತು" ಎಂದು ಮಾರ್ಮಿಕವಾಗಿ ನುಡಿದಿದ್ದರು.
ಇಷ್ಟು ದಿನ ಇಲಾಖೆಯ ಕೆಲಸದೊತ್ತಡದಲ್ಲಿದ್ದ ಅಣ್ಣಾಮಲೈ ಇದೀಗ ಖಾಕಿ ಕಳಚಿಟ್ಟು ತಮ್ಮ ಖಾಸಗಿ ಬದುಕನ್ನು ಆನಂದಿಸತೊಡಗಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಸಂಕ್ರಾಂತಿ ದಿನದಂದು ಮಣಿಕಂಠನ ದರ್ಶನ ಪಡೆಯಲೆಂದು ಶಬರಿಮಲೆಗೆ ಬಂದಿದ್ದರು. ಖಾಕಿ ಯೂನಿಫಾರ್ಮ್ ಕಳಚಿ ಕಪ್ಪು ಲುಂಗಿ , ಹೆಗಲಿಗೊಂದು ಕಪ್ಪು ಶಾಲು ಹಾಕಿ 18 ಮೆಟ್ಟಿಲೇರಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದಾರೆ.
ಅಣ್ಣಾಮಲೈ ತಮ್ಮ ವೃತ್ತಿ ಬದುಕಿನಲ್ಲಿ ಅಪಾರ ಗೌರವ ಸಾಧಿಸಿದ್ದು, ಶಬರಿಗಿರಿಯನ್ನು ಏರುವ ಹಾಗೂ ಇಳಿಯುವ ಸಂದರ್ಭದಲ್ಲಿ ಅವರನ್ನು ಕಂಡ ಅಯ್ಯಪ್ಪ ಭಕ್ತರು ಗೌರವಿಸಿ ಮಾತನಾಡಿ ಸೆಲ್ಫೀಗೆ ಮುಗಿಬಿದ್ದಿದ್ದಾರೆ. ಇನ್ನು ಕೆಲವರು ಸಿಂಗಂಗೆ ಕೈ ಕುಲುಕಿ ಶುಭಹಾರೈಸಿದ್ದಾರೆ. ಕೇರಳದ ಸ್ಥಳೀಯ ಎಸ್.ಪಿ ಅಣ್ಣಾಮಲೈ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಬಹಳ ಸಮಯದಿಂದ ಅಯ್ಯಪ್ಪನ ದರ್ಶನಕ್ಕೆ ಬರುವ ಸಂಕಲ್ಪ ಮಾಡಿದ್ದೆ. ಆದರೆ ಕೆಲಸದ ಒತ್ತಡದಲ್ಲಿ ಆಗಿರಲಿಲ್ಲ. ಮುಂದೇನು ಎನ್ನುವುದು ಸದ್ಯದಲ್ಲೇ ತಿಳಿಸಲಿದ್ದೇನೆ .ಈಗ ದೇವರ ದರ್ಶನ ಮಾಡಿದ್ದೇನೆ ಎಂದು ಹೇಳಿದ್ದಾರೆ.