ಬೆಂಗಳೂರು,ಜೂ17(DaijiworldNews/AZM):ನಿರ್ಮಾಣ ಹಂತದಲ್ಲಿ ನೀರಿನ ಟ್ಯಾಂಕ್ ನ ಸೆಂಟ್ರಿಂಗ್ ಕುಸಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರಕಾರ ತಲಾ 5 ಲಕ್ಷ ರೂ.ಪರಿಹಾರ ಧನ ಘೋಷಿಸಿದೆ.
ಇಂದು ಬೆಳಗ್ಗೆ 11.15ರ ಸುಮಾರಿಗೆ ನಾಗಾವರದ ಲುಂಬಿನಿ ಗಾರ್ಡನ್ ಬಳಿ ಈ ದುರುಂತ ನಡೆದಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಸಚಿವ ಕೃಷ್ಣ ಬೈರೇಗೌಡರವರು ಘಟನೆ ಬಳಿಕ ಗಾಯಾಳುಗಳನ್ನು ದಾಖಲಿಸಲಾಗಿರುವ ಖಾಸಗೀ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ ಪರಿಹಾರ ಧನ ಘೋಷಿಸಿದ್ದಾರೆ.
ಬೆಂಗಳೂರು ಜಲಮಂಡಳಿಯಿಂದಲೇ ಪರಿಹಾರ ಧನ ಹಾಗೂ ಚಿಕಿತ್ಸೆ ವೆಚ್ಚ ಭರಿಸುತ್ತೇವೆ. ಈ ತನಕ ಒಟ್ಟು ಮೂರು ಸಾವು ಖಚಿತವಾಗಿದೆ. ಅವಘಡಕ್ಕೆ ಗುತ್ತಿಗೆದಾರರೇ ಕಾರಣ. ನಷ್ಟವನ್ನ ಗುತ್ತಿಗೆದಾರರಿಂದಲೇ ವಸೂಲಿ ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.ಉಪ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುತ್ತೇವೆ, ಆಸ್ಟರ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಒಬ್ಬರನ್ನ ಐಸಿಯುಗೆ ದಾಖಲಿಸಲಾಗಿದೆ ಎಂದರು.
ಇನ್ನುಳಿದವರನ್ನು ಸೋಮವಾರವೇ ಡಿಸ್ಚಾರ್ಜ್ ಮಾಡಲಾಗುತ್ತದೆ. ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಇದೆ. ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೃಷ್ಣ ಬೈರೇಗೌಡ ಭರವಸೆ ನೀಡಿದರು.