ಪುಲ್ವಾಮ,ಜೂ17(DaijiworldNews/AZM):ಮತ್ತೇ ಪುಲ್ವಾಮದಲ್ಲಿ ಯೋಧರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿ ನಡೆಸಿದ್ದಾರೆ. 9 ಮಂದಿ ಸೈನಿಕರು ಗಾಯಗೊಂಡಿದ್ದಾರೆ.
ಈ ಬಾರಿಯೂ ಉಗ್ರರು ಯೋಧರ ಕನ್ವಾಯ್ ನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದಾರೆ. ಪುಲ್ವಾಮದ ಅರಿಹಲ್ ಗ್ರಾಮದಲ್ಲಿ ಭಯೋತ್ಪಾದಕರು ಐಇಡಿ ಸ್ಫೋಟ ನಡೆಸಿದ್ದಾರೆ. ಸೋಮವಾರ ಸಂಜೆ ಸೇನಾ ಗಸ್ತು ಪಡೆಯು ಅರಿಹಾಲ್ನ ಪ್ರದೇಶದಲ್ಲಿ ಸಾಗುತ್ತಿದ್ದಾಗ 44ನೇ ರಾಷ್ಟ್ರೀಯ ರೈಫಲ್ಸ್ ಪಡೆಯ ಮೊಬೈಲ್ ವೆಹಿಕಲ್ ಪ್ಯಾಟ್ರೋಲ್ ಮೇಲೆ ವಾಹನದ ಆಧಾರಿತ ಐಇಡಿ ದಾಳಿಗೆ ಉಗ್ರರಿಂದ ಪ್ರಯತ್ನ ನಡೆದಿದೆ. ಸೇನಾ ಪಡೆ ಸುರಕ್ಷಿತವಾಗಿದ್ದು ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಸೇನಾ ಬೆಂಗಾವಲು ಮೇಲೆ ದಾಳಿ ನಡೆದಿದೆ ಎನ್ನುವುದು ಆಧಾರ ರಹಿತ ಎಂದು ಭಾರತೀಯ ಸೇನೆ ತಿಳಿಸಿದೆ.
ಸ್ಫೋಟ ಸಂಭವಿಸುತ್ತಿದ್ದಂತೆಯೇ ಉಗ್ರರು-ಸೇನಾಪಡೆ ನಡುವೆ ಗುಂಡಿನ ಚಕಮಕಿ ಪ್ರಾರಂಭವಾಗಿದೆ. ಕ್ಯಾಸ್ಪರ್ ವಾಹನದ ಅಡಿಯಲ್ಲಿ ಐಇಡಿ ಸ್ಫೋಟಗೊಂಡಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಕ್ಯಾಸ್ಪರ್ ವಾಹನ ಭೂಗತ ಸ್ಫೋಟ ನಿರೋಧಕ ವಾಹನವಾಗಿದ್ದು, ಭಯೋತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಇವುಗಳನ್ನು ಬಳಕೆ ಮಾಡಲಾಗುತ್ತದೆ.