ನವದೆಹಲಿ,ಜೂ17(DaijiworldNews/AZM): ಪ.ಬಂಗಾಳದಲ್ಲಿ ಕಿರಿಯ ವೈದ್ಯರೊಂದಿಗೆ ಮಮತಾ ಬ್ಯಾನರ್ಜಿ ನಡೆಸಿದ ಸಭೆ ಯಶಸ್ವಿಯಾಗಿದ್ದು, ವೈದ್ಯರು ಮುಷ್ಕರ ಹಿಂಪಡೆದಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ತಮ್ಮ ಕಚೇರಿಯಲ್ಲಿ ವೈದ್ಯಕೀಯ ಕಾಲೇಜಿನ ತಲಾ ಇಬ್ಬರು ಪ್ರತಿನಿಧಿಗಳ ಜತೆ ಕ್ಯಾಮೆರಾ ಸಮ್ಮುಖದಲ್ಲೇ ಮಾತುಕತೆ ನಡೆಸಿದರು. ಬಳಿಕ ಕೂಡಲೇ ವೈದ್ಯರ ಸುರಕ್ಷತೆಗಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ಪೊಲೀಸರಿಗೆ ಸೂಚಿಸಿದರು. ಜೊತೆಗೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧವೂ ಕಠಿಣ ಕ್ರಮಕೈಗೊಳ್ಳುವುದಾಗಿ ಮಮತಾ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಕಿರಿಯ ವೈದ್ಯರ ಮೇಲೆ ಕೆಲವು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ಒಂದು ವಾರದಿಂದ ವೈದ್ಯ ಸಮುದಾಯ ಮುಷ್ಕರ ನಡೆಸುತ್ತಿತ್ತು.
ವೈದ್ಯರ ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಸಿಎಂ ಮಮತಾ ಬ್ಯಾನರ್ಜಿ, ಮುಷ್ಕರ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಬಳಿಕ 4 ಗಂಟೆಗಳ ಗಡುವು ನೀಡಿದ್ದ ದೀದಿ, ಕರ್ತವ್ಯಕ್ಕೆ ಮರಳದಿದ್ದರೆ ವೈದ್ಯ ವಿದ್ಯಾರ್ಥಿಗಳನ್ನು ಹಾಸ್ಟೆಲ್ನಿಂದ ತೆರವುಗೊಳಿಸುವುದಾಗಿ ಬೆದರಿಕೆ ಹಾಕಿದ್ದರು.