ಬೆಂಗಳೂರು, ಜೂ18(Daijiworld News/SS): ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿಎಸ್ ಯಡಿಯೂರಪ್ಪ ನವೆಂಬರ್ ತಿಂಗಳ ತನಕ ಮುಂದುವರೆಯುವುದು ಖಚಿತವಾಗಿದೆ.
ಏಪ್ರಿಲ್ ತಿಂಗಳಿನಲ್ಲೇ ಯಡಿಯೂರಪ್ಪ ಅವರ ಅಧಿಕಾರ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಸುದ್ದಿ ಹಬ್ಬಿತ್ತು. ಈ ಬಗ್ಗೆ ಅನೇಕ ಬಾರಿ ರಾಜಕೀಯ ವಲಯದಲ್ಲೂ ಮಾತುಗಳು ಕೇಳಿ ಬರುತ್ತಿತ್ತು. ಆದರೆ ನವೆಂಬರ್ ತಿಂಗಳ ತನಕ ಯಡಿಯೂರಪ್ಪ ಅವರ ಅಧಿಕಾರ ಅವಧಿ ಮುಂದುವರೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ 13 ಆಕಾಂಕ್ಷಿಗಳಿದ್ದಾರೆ. ಈ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಿಟಿ ರವಿ, ಆರ್ ಆಶೋಕ್, ಅರವಿಂದ್ ಲಿಂಬಾವಳಿ, ಬಿ ಶ್ರೀರಾಮುಲು ಹೆಸರು ಮುಂಚೂಣಿಯಲ್ಲಿವೆ.
ಜೊತೆಗೆ ಅಮಿತ್ ಶಾ ಅವರು ಕೂಡ ವರ್ಷಾಂತ್ಯದ ತನಕ ಬಿಜೆಪಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎನ್ನುವುದು ಖಚಿತವಾಗಿದೆ. ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಹಲವಾರು ಚುನಾವಣೆಗಳಲ್ಲಿ ಜಯ ಸಾಧಿಸಿದೆ. ಅವರು ಗೃಹ ಸಚಿವರಾದ ಕಾರಣ ಬೇರೆಯವರಿಗೆ ಸ್ಥಾನ ನೀಡುವಂತೆ ತಿಳಿಸಿದ್ದರು. ಇದೀಗ, ಅವರನ್ನೇ ಅಧ್ಯಕ್ಷರಾಗಿ ಮುಂದುವರೆಸಲು ರಾಜಕಿಯ ವಲಯದಲ್ಲಿ ತೀರ್ಮಾನಿಲಾಗಿದೆ.