ಮಂಡ್ಯ, ಜೂ18(Daijiworld News/SS): ತನ್ನ ಅಂತ್ಯಸಂಸ್ಕಾರಕ್ಕೆ ಮುಖ್ಯಮಂತ್ರಿ ಬರಬೇಕೆಂದು ಸೆಲ್ಫೀ ಡೆತ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೆಆರ್ ಪೇಟೆ ತಾಲೂಕು ಅಘಲಯ ಗ್ರಾಮದ ರಮೇಶ್ ಅವರ ನಿವಾಸಕ್ಕೆ ಇಂದು ಸಿಎಂ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಸಾಲಬಾಧೆ, ಕಣ್ಣೆದುರೇ ಒಣಗುತ್ತಿರುವ ಬೆಳೆಯನ್ನು ನೋಡಲಾಗದೇ ತಾಲೂಕಿನ ರೈತ ಸುರೇಶ್ ವೀಡಿಯೋ ಮಾಡಿ ನೇಣಿಗೆ ಶರಣಾಗಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಭಿಮಾನಿಯಾಗಿದ್ದ ಅವರು ಆತ್ಮಹತ್ಯೆಗೂ ಮುನ್ನ ತಮ್ಮ ಅಂತ್ಯಸಂಸ್ಕಾರಕ್ಕೆ ಬರುವಂತೆ ಹಾಗೂ ಕೆರೆಗಳನ್ನು ತುಂಬಿಸಿ ರೈತರ ಕಷ್ಟ ಬಗೆಹರಿಸುವಂತೆ ಮುಖ್ಯಮಂತ್ರಿಯಲ್ಲಿ ವೀಡಿಯೋ ಮೂಲಕ ಮನವಿ ಮಾಡಿದ್ದರು.
ಆದರೆ, ಮನೆಯವರು ಸುರೇಶ್ ಅವರ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದು ಸುರೇಶ್ ಅವರ ಮೊಬೈಲ್ ಆನ್ ಮಾಡಿ ನೋಡಿದಾಗ ಅವರು ವಿಡಿಯೋ ಬಯಲಾಗಿತ್ತು. ವಿಷಯ ತಿಳಿದ ಬಳಿಕ ಕುಮಾರಸ್ವಾಮಿ ಮೃತರ ಮನೆಗೆ ಭೇಟಿ ನೀಡಿದ್ದಾರೆ.
ಬಳಿಕ ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸಿಎಂ, ಸೆಲ್ಫೀ ಡೆತ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೆಆರ್ ಪೇಟೆ ತಾಲೂಕು ಅಘಲಯ ಗ್ರಾಮದ ರಮೇಶ್ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದ್ದೆ. ಈ ಘಟನೆಯಿಂದ ನನಗೆ ತೀವ್ರ ನೋವಾಗಿದೆ. ಸರ್ಕಾರ ರೈತರ ಹಿತ ರಕ್ಷಣೆಗೆ ಆದ್ಯತೆ ನೀಡಿ ಕಾರ್ಯಕ್ರಮ ರೂಪಿಸುತ್ತಿದೆ. ಬದುಕಿನಲ್ಲಿ ಏಳುಬೀಳು ಸಹಜ ಎಂದು ಹೇಳಿದ್ದಾರೆ.
ಕಷ್ಟಗಳನ್ನು ನಾವು ದಿಟವಾಗಿ ಎದುರಿಸಬೇಕು. ಯಾವ ರೈತರೂ ಆತ್ಮಹತ್ಯೆ ಮಾಡಬೇಡಿ. ರೈತರಲ್ಲಿ ಆತ್ಮಸ್ಥೆರ್ಯ ತುಂಬಲು ಎಲ್ಲರೂ ಮುಂದಾಗಬೇಕು ಎನ್ನುವುದು ನನ್ನ ಆಶಯ ಎಂದು ಹೇಳಿದ್ದಾರೆ.