ಶ್ರೀನಗರ, ಜೂ18(Daijiworld News/SS): ಜೂ.17ರಂದು ಪುಲ್ವಾಮ ಉಗ್ರದಾಳಿಯನ್ನೇ ಹೋಲುವಂತೆ ನಡೆದ ದಾಳಿಯಲ್ಲಿ ಗಾಯಗೊಂಡಿದ್ದ 9 ಯೋಧರಲ್ಲಿ ಇಬ್ಬರು ಇಂದು ಮೃತರಾಗಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅರಿಹಾಲ್ ಗ್ರಾಮದಲ್ಲಿ ಸೇನೆಯ ವಿಶೇಷ ಪಡೆಗಳ ಬೆಂಗಾವಲು ವಾಹನದ ಮೇಲೆ ಈ ಸುಧಾರಿತ ಸ್ಫೋಟಕ(ಐಇಡಿ)ದ ಮೂಲಕ ಉಗ್ರರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿ ದಾಳಿ ನಡೆಸಿದ್ದ ಒಂಬತ್ತು ಯೋಧರು ಗಾಯಗೊಂಡಿದ್ದರು. ಇದೀಗ ಗಾಯಗೊಂಡವರಲ್ಲಿ ಇಬ್ಬರು ಯೋಧರು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಪುಲ್ವಾಮ ಜಿಲ್ಲೆಯ ಅರಿಹಾಲ್ ಗ್ರಾಮದ ಸಮೀಪ ಸೋಮವಾರ ಮಧ್ಯಾಹ್ನ 44ನೇ ರಾಷ್ಟ್ರೀಯ ರೈಫಲ್ಸ್ನ ಸೇನಾ ವಾಹನವನ್ನು ಗುರಿಯಾಗಿಟ್ಟುಕೊಂಡು ಪಾತಕಿಗಳು ಬಾಂಬ್ ದಾಳಿ ನಡೆಸಿದ್ದರು. ತಕ್ಷಣ ಎಚ್ಚೆತ್ತ ಯೋಧರು, ಗುಂಡಿನ ಪ್ರತಿದಾಳಿ ನಡೆಸಿದ್ದರು. ಈ ವೇಳೆ ಉಗ್ರರ ಜತೆಗೆ ಸ್ಥಳೀಯರೂ ಸೇರಿಕೊಂಡು ಯೋಧರ ವಿರುದ್ಧ ಸಂಷರ್ಘ ನಡೆಸಿದ್ದರು. ಕೆಲ ಕಾಲ ಗುಂಡಿನ ಚಕಮಕಿ, ಕಲ್ಲುತೂರಾಟ ನಡೆದಿತ್ತು. ಅಂತಿಮವಾಗಿ ಉಗ್ರರು ಪಲಾಯನಗೈದಿದ್ದರು. ಸುಧಾರಿತ ಸ್ಫೋಟಕಗಳ ನೆರವಿನಿಂದ ನಡೆದ ದಾಳಿಯಲ್ಲಿ ಒಂಬತ್ತು ಯೋಧರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿತ್ತು.
ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ದಾಳಿ ನಡೆಯಬಹುದು ಎಂದು ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ಭಾನುವಾರವಷ್ಟೇ ಎಚ್ಚರಿಕೆ ನೀಡಿದ್ದರು. ಅಮೆರಿಕದ ಜತೆಗೂ ಈ ಮಾಹಿತಿ ಹಂಚಿಕೊಂಡಿದ್ದರು. ಅದಾಗಿ ಮರು ದಿನವೇ ಈ ದಾಳಿ ನಡೆದಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ ಇದೇ ಜಿಲ್ಲೆಯಲ್ಲಿ ಸಿಆರ್ಪಿಎಫ್ ವಾಹನಗಳ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದ ಉಗ್ರರು 44 ಯೋಧರನ್ನು ಬಲಿಪಡೆದಿದ್ದರು.