ಕೋಲ್ಕತ್ತಾ, ಜೂ18(Daijiworld News/SS): ತೃಣಮೂಲ ಕಾಂಗ್ರೆಸ್ ದುರ್ಬಲ ಪಕ್ಷವಲ್ಲ ಎಂದು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಟಿಎಂಸಿ ಕೌನ್ಸಿಲರ್'ಗಳ ಸಭೆಯಲ್ಲಿ ಮಾತನಾಡಿದ ಅವರು, ಒಬ್ಬರು ಪಕ್ಷ ಬಿಟ್ಟು ಹೋದರೆ 500 ಜನ ಸೇರ್ಪಡೆಯಾಗುತ್ತಾರೆ. ಹಣದ ಆಸೆಗಾಗಿ 15ರಿಂದ 20 ಕೌನ್ಸಿಲರ್'ಗಳು ಪಕ್ಷ ತೊರೆದರೆ ನಾನು ಹೆದರುವುದಿಲ್ಲ. ಶಾಸಕರು ಪಕ್ಷವನ್ನು ಬಿಟ್ಟು ಹೋಗಲು ಇಚ್ಛಿಸಿದರೆ ಬಿಟ್ಟು ಹೋಗಲಿ. ಪಕ್ಷದಲ್ಲಿ ಕಳ್ಳರನ್ನು ಇಟ್ಟುಕೊಳ್ಳಲು ನಾವು ಬಯಸುವುದಿಲ್ಲ ಎಂದು ಹೇಳಿದರು.
ನವದೆಹಲಿಯಲ್ಲಿ ಜೂ.17ರಂದು ತೃಣಮೂಲ ಕಾಂಗ್ರೆಸ್ನ ಶಾಸಕ ಸುನೀಲ್ ಸಿಂಗ್ ಹಾಗೂ 15 ಕೌನ್ಸಿಲರ್'ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವೈದ್ಯರ ಮುಷ್ಕರ ಬೆನ್ನಲ್ಲೇ, ಟಿಎಂಸಿಗೆ ಪಕ್ಷಾಂತರ ಶಾಕ್ ಉಂಟಾಗಿದೆ.
ಲೋಕಸಭೆ ಚುನಾವಣೆಯ ನಂತರ ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯ ಗಾಳಿ ಬೀಸಿದ್ದು, ಹಲವು ಟಿಎಂಸಿ ಶಾಸಕರು ಈಗಾಗಲೇ ಬಿಜೆಪಿ ಸೇರಿದ್ದಾರೆ. ಇದು ಮಮತಾ ಬ್ಯಾನರ್ಜಿ ಅವರಿಗೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಸಾಧನೆಯಿಂದ ಈಗಾಗಲೇ ಕಂಗೆಟ್ಟಿರುವ ಮಮತಾ ಬ್ಯಾನರ್ಜಿಗೆ ಒಂದರ ಮೇಲೊಂದು ಬರಸಿಡಿಲು ಬಂದೆರಗುತ್ತಲೇ ಇದೆ.