ಮುಂಬಯಿ, ಜೂ 18 (Daijiworld News/MSP): ಕೇರಳದ ಆಡಳಿತಾರೂಢ ಸಿಪಿಎಂನ ರಾಜ್ಯ ಕಾರ್ಯದರ್ಶಿ, ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೋಯ್ ವಿನೋದಿನಿ ಬಾಲಕೃಷ್ಣನ್ ವಿರುದ್ಧ ಮುಂಬಯಿನ ಪೊಲೀಸ್ ಠಾಣೆ ರೇಪ್ ಮತ್ತು ವಂಚನೆ ಪ್ರಕರಣ ದಾಖಲಾಗಿದೆ.
ಈ ಹಿಂದೆ ಬಾರ್ ಡ್ಯಾನ್ಸರ್ ಆಗಿದ್ದ ಬಿಹಾರದ ಮೂಲದ , ಪ್ರಸ್ತುತ ಮುಂಬಯಿನಲ್ಲಿ ನೆಲೆಸಿರುವ 33ರ ಹರೆಯದ ಮಹಿಳೆ ಮುಂಬಯಿಯ ಓಶಿವಾರಾ ಠಾಣೆಯಲ್ಲಿ ಬಿನೋಯ್ ತನ್ನನ್ನು ಅತ್ಯಾಚಾರ ಮಾಡಿ ವಂಚಿಸಿದ್ದಾನೆ ಎಂದು ಪೊಲೀಸರ ಬಳಿ ದೂರು ಸಲ್ಲಿಸಿದ್ದಾರೆ. ಮಾಜಿ ಗೃಹ ಸಚಿವರ ಪುತ್ರ ಬಿನೋಯ್ ವಿನೋದಿನಿ ತನ್ನನ್ನು ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾರೆ. ಇದರಿಂದ ನಮಗೆ ಮಗುವೂ ಜನಿಸಿದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ಬಾರ್ ಡಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಬಿನೋಯ್ ಗೆ ದುಬೈನಲ್ಲಿ ಪರಿಚಯವಾಗಿದ್ದು, ಇದೇ ಸಂದರ್ಭ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಮದುವೆಯಾಗುವ ಭರವಸೆ ಆಕೆಗೆ ನೀಡಿದ್ದು, ಇದಕ್ಕಾಗಿ ಬಾರ್ ಡಾನ್ಸರ್ ವೃತ್ತಿಯನ್ನು ತೊರೆಯುವಂತೆ ಆಕೆಯಲ್ಲಿ ಹೇಳಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.
2010 ರಲ್ಲಿ ಮುಂಬಯಿನ ಅಂಧೇರಿಯ ಬಾಡಿಗೆ ಫ್ಲ್ಯಾಟ್ ಪಡೆದಿದ್ದು, ಬಿನೋಯ್ ಇಲ್ಲಿಗೆ ಪದೇ ಪದೇ ಭೇಟಿ ನೀಡುತ್ತಿದ್ದ. ಆದರೆ ಬಿನೋಯ್ ಬೇರೊಂದು ವಿವಾಹವಾದ ವಿಚಾರ ಕಳೆದ ವರ್ಷ ತಿಳಿದುಬಂದಿದ್ದು, ಇದರಿಂದ ನಮ್ಮಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿ ಆತ ನನಗೆ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿನೋಯ್ ," ದೂರುದಾರೆ ನನ್ನನ್ನು ಬ್ಲಾಕ್ಮೇಲ್ ಮಾಡುವ ತಂತ್ರ ಅನುಸರಿಸುತ್ತಿದ್ದಾರೆ" ಎಂದು ಹೇಳಿದ್ದಾರೆ. ಗಲ್ಫ್ ಮೂಲದ ಜಾಸ್ ಟೂರಿಸಂ ಕಂಪನಿಗೆ ಮೋಸ ಮಾಡಿದ ಆರೋಪದಲ್ಲಿ ದುಬೈ ಕೋರ್ಟ್ ಬಿನೋಯ್ಗೆ ಪ್ರಯಾಣ ನಿಷೇಧ ಹೇರಿದೆ.