ನವದೆಹಲಿ, ಜೂ 18 (Daijiworld News/MSP): ಕರ್ತವ್ಯದಲ್ಲಿ ಅದಕ್ಷತೆ, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸುತ್ತಲೇ ಬಂದಿದ್ದ ಕೇಂದ್ರ ಸರಕಾರ ಮತ್ತೊಮ್ಮೆ ಭ್ರಷ್ಟ ಅಧಿಕಾರಿಗಳಿಗೆ ಮನೆ ದಾರಿ ತೋರಿಸಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಭ್ರಷ್ಟಾಚಾರ ಹಾಗೂ ದುರ್ವರ್ತನೆ ಆರೋಪ ಎದುರಿಸುತ್ತಿದ್ದ 12 ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಮಾಡಿದ್ದ ಮೋದಿ ಸರ್ಕಾರ ಇದೀಗ ಮತ್ತೊಮ್ಮೆ ಭ್ರಷ್ಟಾಚಾರಿಗಳ ವಿರುದ್ದ ಪ್ರಹಾರ ನಡೆಸಿದೆ.
ರೂಲ್ 56(j) ಅಡಿಯಲ್ಲಿ ತೆರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ 15 ಅಧಿಕಾರಿಗಳಿಗೆ ಕಡ್ಡಾಯವಾಗಿ ನಿವೃತ್ತಿ ತೆಗೆದುಕೊಳ್ಳುವಂತೆ ಮಾಡಿ ನಿಮ್ಮ ಮಹಾನ್ ಸೇವೆ ಸಾಕು ಎಂದು ಮನೆ ಕಡೆ ದಾರಿ ತೋರಿದೆ. 15 ಅಧಿಕಾರಿಗಳಲ್ಲಿ 11 ಮಂದಿ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದೆ. ಇನ್ನುಳಿದ ಇಬ್ಬರ ವಿರುದ್ಧ ರೆವೆನ್ಯೂ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ. ಆರೋಪಿತ 15 ಅಧಿಕಾರಿಗಳಲ್ಲಿ ಹೆಚ್ಚಿನವರು ಕಮಿಷನರ್ ಹಾಗೂ ಉನ್ನತ ಶ್ರೇಣಿಯ ಹಿರಿಯ ಅಧಿಕಾರಿಗಳಾಗಿದ್ದಾರೆ.
ಕಡ್ದಾಯವಾಗಿ ನಿವೃತ್ತಗೊಳುತ್ತಿರುವ ಅಧಿಕಾರಿಗಳೆಂದರೆ ವಿರೇಂದ್ರ ಅಗರ್ವಾಲ್, ಅಮರೇಶ್ ಜೈನ್, ನಳಿನ್ ಕುಮಾರ್, ಅನೂಪ್ ಶ್ರೀವಾಸ್ತವ್, ಅತುಲ್ ದೀಕ್ಷಿತ್, ಸನ್ಸಾರ್ ಚಂದ್, ಶ್ರೀ ಹರ್ಷಾ, ವಿನಯ್ ಬ್ರಿಜ್ ಸಿಂಗ್, ಎಸ್ಎಸ್ ಪಬಾನಾ, ಎಸ್ಎಸ್ ಭಿಷ್ಟ್, ವಿನೋದ್ ಕುಮಾರ್ ಸಂಗ, ರಾಜು ಸೇಕರ್, ಅಶೋಕ್ ಕುಮಾರ್ ಅಸ್ವಾಲ್, ಮೊಹಮ್ಮದ್ ಅಲ್ತಾಫ್ ಹಾಗೂ ಅಶೋಕ್ ಮಹಿದಾ ಇವರಾಗಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಜಾರಿಗೆ ತಂದ ಹೊಸ ನಿಯಮದ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ನೌಕರನ ಸೇವಾವಧಿಯನ್ನು 'ಮೂಲಭೂತ ನಿಯಮ 56(ಜೆ) ಅಥವಾ ರೂಲ್ 48 ಅಥವಾ ಸಿಸಿಎಸ್ (ಪಿಂಚಣಿ) ನಿಯಮಗಳ' ಅಡಿಯಲ್ಲಿ ಅವಧಿಪೂರ್ವವಾಗಿ ಮೊಟುಕುಗೊಳಿಸಬಹುದು ಎಂದು ಸೆ.11, 2015ರಿಂದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶದಲ್ಲಿ ಇಲಾಖೆಯು ಕಡ್ಡಾಯ ಪೂರ್ವ ನಿವೃತ್ತಿಯನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್ನ ತೀರ್ಪನ್ನೂ ಉಲ್ಲೇಖಿಸಲಾಗಿತ್ತು.