ಬೆಂಗಳೂರು,ಜೂ18(DaijiworldNews/AZM): ತಕ್ಷಣವೇ ರಾಜ್ಯ ವಿಧಾನಮಂಡಲದ ಅಧಿವೇಶನ ಕರೆಯಬೇಕೆಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಒತ್ತಾಯಿಸಿದ್ದಾರೆ. ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಭೂಮಿ ನೀಡುವ ವಿಚಾರ ಸೇರಿದಂತೆ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ನಡೆಸಬೇಕು ಎಂದಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚರ್ಚೆಗೆ ಆಹ್ವಾನಿಸಿದ್ದಾರೆ. ನಾವು ವಿಧಾನಸಭೆ ಅಧಿವೇಶನದಲ್ಲೆ ಆ ವಿಚಾರವನ್ನು ಚರ್ಚೆ ಮಾಡುತ್ತೇವೆ. ಆಗ ಅದರ ಸತ್ಯಸತ್ಯತೆ ಹೊರಬರಲಿದೆ ಎಂದರು.
ಜಿಂದಾಲ್ ಕಂಪನಿಗೆ ಜಮೀನು ನೀಡುವುದನ್ನು ವಿರೋಧಿಸಿ ನಾವು ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದಾಗ ಮಾಹಿತಿ ನೀಡಬಹುದಿತ್ತು. ಧರಣಿ ಕೂತಾಗಲೂ ಇಲ್ಲ. ನಾವು ಮುಖ್ಯಮಂತ್ರಿ ಮನೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದಾಗಲೂ ನಮ್ಮ ನಾಯಕರನ್ನು ಕರೆದು ಚರ್ಚಿಸಬಹುದಿತ್ತು. ಆದರೆ ಸಚಿವರೊಬ್ಬರನ್ನು ಕಳುಹಿಸಿದ್ದರು ಎಂದರು.
ಇದನ್ನು ನೋಡಿದರೆ ಸರ್ಕಾರ ಮಾಹಿತಿ ಕೊಟ್ಟಂಗೂ ಇರಬೇಕು, ಬಿಟ್ಟಂಗೂ ಆಗಬೇಕು ಎಂಬಂತಾಗಿದೆ. ನೈಜವಾದ ಸ್ಪಂದನೆ ಸಿಗಲಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂದು ಪ್ರಶ್ನಿಸಿದ ಅವರು, ಜಿಂದಾಲ್ ವಿರುದ್ಧ ಹೋರಾಟವನ್ನು ತಾರ್ಕಿಕ ಅಂತ್ಯದವರೆಗೂ ಕೊಂಡೊಯ್ಯುತ್ತೇವೆ. ಜಿಲ್ಲಾ ಮಟ್ಟಕ್ಕೂ ಹೋರಾಟವನ್ನು ನಡೆಸುತ್ತೇವೆ ಎಂದರು.
ಜಿಂದಾಲ್ಗೆ ಭೂಮಿ ನೀಡುವ ವಿಚಾರದಲ್ಲಿ ದನಿ ಎತ್ತಿದವರು ಬಿಜೆಪಿಯವರು ಮಾತ್ರವಲ್ಲ. ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಎಚ್.ಕೆ.ಪಾಟೀಲ್, ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಸೇರಿದಂತೆ ಹಲವರು ವಿಷಯ ಪ್ರಸ್ತಾಪ ಮಾಡಿದ್ದಾರೆ. ಅವರಿಗಾದರೂ ಸಮಂಜಸವಾದ ಉತ್ತರ ನೀಡಬೇಕು ಎಂದರು.