ಲಖನೌ,ಜೂ18(DaijiworldNews/AZM):ಉತ್ತರಪ್ರದೇಶ ರಾಜ್ಯ ಸರಕಾರ ಇನ್ನು ಮುಂದೆ ಪತ್ರಿಕಾ ಹೇಳಿಕೆಯನ್ನು ಸಂಸ್ಕೃತದಲ್ಲೂ ಬಿಡುಗಡೆ ಮಾಡಲು ತೀರ್ಮಾನಿಸಿದ್ದು, ಸಂಸ್ಕೃತದಲ್ಲಿ ಮೊದಲ ಪತ್ರಿಕಾ ಹೇಳಿಕೆಯನ್ನು ಸೋಮವಾರ ಸರಕಾರದ ಮಾಹಿತಿ ಇಲಾಖೆಯು ನೀಡಿದೆ.
ಈ ಕುರಿತು ಮಾಹಿತಿ ಇಲಾಖೆಯ ಹಿರಿಯ ಅಧಿಕಾರಿಗಳು ಮಾತನಾಡಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮುಖ್ಯ ಭಾಷಣಗಳು ಹಾಗೂ ಸರಕಾರದ ಮಾಹಿತಿಗಳನ್ನು ಇನ್ನು ಮುಂದೆ ಹಿಂದಿ, ಇಂಗ್ಲಿಷ್ ಮತ್ತು ಉರ್ದುವಿನ ಜತೆಯಲ್ಲಿ ಸಂಸ್ಕೃತದಲ್ಲೂ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಭಾಷಣವನ್ನು ಸಾರ್ವಜನಿಕರ ಬಿಡುಗಡೆಗಾಗಿ ಸಂಸ್ಕೃತಕ್ಕೆ ಭಾಷಾಂತರ ಮಾಡಲು ಲಖನೌ ಮೂಲದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ನೆರವು ಪಡೆಯಲು ಇಲಾಖೆಯು ನಿರ್ಧರಿಸಿದೆ. "ಇದೇ ಮೊದಲ ಬಾರಿಗೆ ಇಂಥ ಕ್ರಮ ತೆಗೆದುಕೊಳ್ಳಲಾಗಿದೆ. ನೀತಿ ಆಯೋಗದ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಮಾಡಿದ ಭಾಷಣವನ್ನು ಸಂಸ್ಕೃತಕ್ಕೆ ಭಾಷಾಂತರಿಸಿ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಉತ್ತಮ ಸ್ಪಂದನೆ ದೊರೆತಿತ್ತು. ಅದನ್ನು ಇನ್ನಷ್ಟು ವಿಸ್ತರಿಸಲು ಯೋಜಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಸೋಮವಾರ ಮಾತನಾಡಿದ ಆದಿತ್ಯನಾಥ್, ಈ ದೇಶದ ಡಿಎನ್ ಎನಲ್ಲೇ ಸಂಸ್ಕೃತ ಇದೆ. ಆದರೆ ಈಗ ಪುರೋಹಿತರ ಕೆಲಸಕ್ಕೆ ಮಾತ್ರ ಅದು ಸೀಮಿತವಾಗಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಸಂಸ್ಕೃತದಲ್ಲಿ ಪ್ರಕಟವಾಗುವ ಇಪ್ಪತ್ತೈದು ನಿಯತಕಾಲಿಕೆಗಳು ಇವೆ. ಅವುಗಳಲ್ಲಿ ಯಾವುದೂ ದಿನಪತ್ರಿಕೆಗಳಿಲ್ಲ.