ನವದೆಹಲಿ,ಜೂ18(DaijiworldNews/AZM):ವಿಪಕ್ಷಗಳ ಜೈ ಶ್ರೀರಾಮ್, ವಂದೇ ಮಾತರಂ ಘೋಷಣೆಗಳ ನಡುವೆಯೇ 17ನೇ ಲೋಕಸಭೆಯ ಮೊದಲ ಅಧಿವೇಶನದ ಎರಡನೇ ದಿನವಾದ ಇಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೇಹದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಓವೈಸಿ ಪ್ರಮಾಣವಚನ ಸ್ವೀಕಾರಕ್ಕೆ ಸ್ಪೀಕರ್ ಸಮೀಪದ ವೇದಿಕೆ ಬಳಿಗೆ ಸದನದ ಮೆಟ್ಟಿಲು ಇಳಿದು ಬರುವಾಗ ಕೆಲ ಸಂಸದರು ವಂದೇ ಮಾತರಂ, ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗಿದರು. ಇದನ್ನು ನಗುತ್ತಲೇ ಸ್ವಾಗತಿಸಿದ ಓವೈಸಿ, ತಮ್ಮ ಎರಡು ಕೈಗಳನ್ನು ಬೀಸುತ್ತಾ ವೇದಿಕೆ ಬಳಿಗೆ ಬಂದರು. ಜೈ ಭೀಮ್, ತಕ್ಬೀರ್ ಅಲ್ಲಾ ಹು ಅಕ್ಬರ್ ಹೆಸರಿನಲ್ಲಿ ಉರ್ದು ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಆ ನಂತರ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಓವೈಸಿ, ಇದು ಒಳ್ಳೆಯದೇ. ಏಕೆಂದರೆ ಈ ಘಟನೆ ನನಗೆ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ. ಅದೇ ರೀತಿ ಅವರು ಸಂವಿಧಾನವನ್ನು ನೆನಪು ಮಾಡಿಕೊಳ್ಳಲಿ ಮತ್ತು ಬಿಹಾರದಲ್ಲಿ ಮಕ್ಕಳು ಸಾಯುತ್ತಿರುವುದನ್ನು ನೆನಪು ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.