ಬೆಂಗಳೂರು,ಜೂ18(DaijiworldNews/AZM): ಐಎಂಎ ಸಮೂಹ ಸಂಸ್ಥೆಗಳ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮನ್ಸೂರ್ ಖಾನ್ ಕಚೇರಿ, 3ನೇ ಪತ್ನಿಯ ಮನೆಯ ಮೇಲೆ ಎಸ್ಐಟಿ ತನಿಖಾಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ 33 ಕೋಟಿ ರೂ. ಬೆಲೆಯ ಚಿನ್ನಾಭರಣ, ದಾಖಲಾತಿಗಳನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನ ಜಯನಗರದ 11ನೇ ಮುಖ್ಯರಸ್ತೆಯಲ್ಲಿರುವ ಐಎಂಎ ಜ್ಯುವೆಲರ್ಸ್ನ ಕಚೇರಿಯ ಕಟ್ಟಡ ಹಾಗೂ ಮನ್ಸೂರ್ ಖಾನ್ನ ವಿಚ್ಛೇದಿತ 3ನೇ ಪತ್ನಿಯ ಮನೆಯ ಮೇಲೆ ಶೋಧ ನಡೆಸಿ, ಚಿನ್ನಾಭರಣ, ದಾಖಲಾತಿ ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ ಎಂದು ಸಿಟ್ ಅಧಿಕೃತ ಮೂಲಗಳು ತಿಳಿಸಿವೆ.
ಜಯನಗರದ 11ನೇ ಮುಖ್ಯರಸ್ತೆಯಲ್ಲಿರುವ ಐಎಂಎ ಜ್ಯುವೆಲರ್ಸ್ನ ಕಚೇರಿಯಲ್ಲಿ 13 ಕೋಟಿ ರೂ. ಮೌಲ್ಯದ 43 ಕೆ.ಜಿ.ಚಿನ್ನಾಭರಣ, 17.6 ಕೋಟಿ ಮೌಲ್ಯದ 5864 ಕ್ಯಾರೆಟ್ ಡೈಮಂಡ್, 1.5 ಕೋಟಿ ಮೌಲ್ಯದ 520 ಕೆಜಿ ಬೆಳ್ಳಿ, 1.5 ಕೋಟಿ ಮೌಲ್ಯ ಸೈಲ್ಟರ್ ಡೈಮಂಡ್ಗಳನ್ನು ಪತ್ತೆಯಾಗಿದೆ.
ಅದೇ ರೀತಿ, ವಿಚ್ಛೇದಿತ 3ನೇ ಪತ್ನಿ ತಬಸ್ಸುಮ್ ಬಾನು ಅವರ ಮನೆಯಲ್ಲಿ ಶೋಧ ನಡೆಸಿದಾಗ, 39.5 ಲಕ್ಷ ಮೌಲ್ಯದ 1,503.7 ಗ್ರಾಂ ಚಿನ್ನಾಭರಣ, 1.5 ಕೆಜಿ ಬೆಳ್ಳಿ, 2.69 ಲಕ್ಷ ನಗದು ಹಣ ಜಪ್ತಿ ಮಾಡಲಾಗಿದ್ದು, ಇದರ ಒಟ್ಟು ಮೌಲ್ಯ 40 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ. ತಿಲಕ್ನಗರದ ಎಸ್ಆರ್ಕೆ ಗಾರ್ಡನ್ನಲ್ಲಿರುವ 1.20 ಕೋಟಿ ಮೌಲ್ಯದ ಅಪಾರ್ಟ್ಮೆಂಟ್ನ ದಾಖಲಾತಿಗಳನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸಿಟ್ ಹೇಳಿದೆ.
ಇದಲ್ಲದೆ, ಆರೋಪಿ ಮನ್ಸೂರ್ ಖಾನ್ಗೆ ಸೇರಿದೆ ಎನ್ನಲಾದ ವಾಣಿಜ್ಯ ಕಟ್ಟಡಗಳು, ಜಮೀನುಗಳು, ಸ್ಕೂಲ್ ಪ್ರಾಪರ್ಟಿ, ಅಪಾರ್ಟ್ಮೆಂಟ್, ಇತ್ಯಾದಿ ಸೇರಿದಂತೆ ಒಟ್ಟು 26 ಸ್ಥಿರಾಸ್ತಿಗಳನ್ನು ಇದುವರೆಗೂ ಗುರುತಿಸಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.