ರಾಮನಗರ, ಜೂ 18 (Daijiworld News/SM): ಜೆಡಿಎಸ್ ಶಾಸಕರಿಗೆ ಬಿಜೆಪಿಯವರು 10 ಕೋಟಿ ರೂಪಾಯಿ ಆಮೀಷ ಒಡ್ಡಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬಿಜೆಪಿಯವರು ನಮ್ಮ ಜೆಡಿಎಸ್ ಶಾಸಕರಿಗೆ ಕರೆ ಮಾಡಿ, 'ನಮ್ಮ ಪಕ್ಷಕ್ಕೆ ಬನ್ನಿ ನಿಮಗೆ 10 ಕೋಟಿ ಕೊಡುತ್ತೇನೆ' ಎಂದು ಆಮೀಷವೊಡ್ಡಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿಯ ಆಪರೇಷನ್ ಕಮಲ ಇನ್ನೂ ನಿಂತಿಲ್ಲವೆಂಬ ಅನುಮಾನ ಶುರುವಾಗಿದೆ. ನಿನ್ನೆ ರಾತ್ರಿ ಜೆಡಿಎಸ್ನ ಶಾಸಕರಿಗೆ ಬಿಜೆಪಿ ಮುಖಂಡರು ಕರೆ ಮಾಡಿ, ಈಗಾಗಲೇ ಕಾಂಗ್ರೆಸ್-ಜೆಡಿಎಸ್ನ ಹತ್ತು ಶಾಸಕರು ನಮ್ಮ ಕಡೆ ಬಂದಿದ್ದಾರೆ, ನೀವು ಬರುವುದಾದರೆ 10 ಕೋಟಿ ಹಣವನ್ನು ನೀವು ಕೇಳಿದ ಕಡೆಗೆ ತಂದು ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ತಲ್ಲಣವನ್ನುಂಟು ಮಾಡಿದೆ.