ಪುಲ್ವಾಮಾ,ಜು18(DaijiworldNews/AZM): ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮದಲ್ಲಿರುವ ಪೊಲೀಸ್ ಠಾಣೆ ಮೇಲೆ ಉಗ್ರರು ಇಂದು ಗ್ರೆನೇಡ್ ಎಸೆದ ಪರಿಣಾಮ ಅದು ಜನನಿಬಿಡ ರಸ್ತೆಯ ಹೊರಭಾಗದಲ್ಲಿ ಸ್ಫೋಟಗೊಂಡು ಮೂವರು ನಾಗರಿಕರು ಗಂಭೀರ ಗಾಯಗೊಂಡಿದ್ದಾರೆ.
ಕೆಲವರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ಗಾಯಗೊಂಡ 10 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟ ಸಂಭವಿಸಿದ ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸೇನಾ ವಾಹನ ಗುರಿಯಾಗಿರಿಸಿ ಸ್ಫೋಟ ನಡೆಸಿ ಇಬ್ಬರು ಯೋಧರು ಹಾಗೂ ಇತರ 16 ಮಂದಿ ಗಾಯಗೊಳ್ಳಲು ಕಾರಣವಾದ ಘಟನೆಯ ಒಂದು ದಿನದ ಬಳಿಕ ಈ ಘಟನೆ ನಡೆದಿದೆ.
ಪುಲ್ವಾಮದ ಅಹಿಹಾಲ್ ಗ್ರಾಮದ ಸಮೀಪ ನಡೆಸಿದ ಐಇಡಿ ಸ್ಫೋಟದಿಂದ 44 ರಾಷ್ಟ್ರೀಯ ರೈಪಲ್ಸ್ನ ವಾಹನ ಸಂಪೂರ್ಣ ಜಖಂಗೊಂಡಿತ್ತು. ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕಳೆದ ವಾರ ಪಾಕಿಸ್ತಾನ ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ಗೆ ಮಾಹಿತಿ ನೀಡಿತ್ತು. ಈ ಮಾಹಿತಿಯನ್ನು ಅಮೆರಿಕದೊಂದಿಗೆ ಕೂಡ ಹಂಚಿಕೊಳ್ಳಲಾಗಿತ್ತು.