ಹೊಸದಿಲ್ಲಿ, ಜೂ19(Daijiworld News/SS): ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಮಕ್ಕಳನ್ನು ಅಸಭ್ಯ ಮತ್ತು ಅಶ್ಲೀಲವಾಗಿ ತೋರಿಸದಂತೆ ದೇಶದ ಖಾಸಗಿ ಟಿವಿ ಚಾನಲ್ಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಚಾರ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
ಈಗಾಗಲೇ ಈ ಕುರಿತು ಹಲವು ಟಿವಿ ವಾಹಿನಿಗಳಿಗೆ ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಮಕ್ಕಳನ್ನು ಅಸಭ್ಯ ಮತ್ತು ಅಶ್ಲೀಲವಾಗಿ ತೋರಿಸದಂತೆ ನೋಟಿಸ್ ಸಹ ಜಾರಿ ಮಾಡಲಾಗಿದೆ.
ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಸಿನಿಮಾಗಳಲ್ಲಿ ಜನಪ್ರಿಯ ನಟ-ನಟಿಯರು ಮಾಡಿರುವ ನೃತ್ಯಗಳನ್ನು ಮಕ್ಕಳಿಂದ ಮಾಡಿಸಲಾಗುತ್ತಿದೆ. ಆದರೆ ಇದು ಅನೇಕ ಸಂದರ್ಭಗಳಲ್ಲಿ ಅಸಭ್ಯ, ಅಶ್ಲೀಲ ಮತ್ತು ಆಕ್ಷೇಪಾರ್ಹವಾಗಿರುತ್ತದೆ. ಹಿರಿಯರ ನೃತ್ಯ ಭಂಗಿಗಳನ್ನು ಮಕ್ಕಳು ರಿಯಾಲಿಟಿ ಶೋಗಳಲ್ಲಿ ಅನುಕರಿಸುವುದರಿಂದ ಎಳೆಮನಸುಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಂತಹ ನೃತ್ಯಗಳಲ್ಲಿ ಮಕ್ಕಳ ಅಭಿನಯಿಸಲು ಅವಕಾಶ ನೀಡಬಾರದು ಎಂದು ನೋಟಿಸ್ನಲ್ಲಿ ಸೂಚಿಸಲಾಗಿದೆ.