ಕೋಲ್ಕತ್ತಾ, ಜೂ 19 (Daijiworld News/MSP): ಗಂಗಾ ನದಿಯ ಉಪನದಿಯಾದ ಹೂಗ್ಲಿ ನದಿಗೆ ಹಾರಿ, ವಿಶ್ವ ಪ್ರಸಿದ್ಧ ಮಾಂತ್ರಿಕ ಹ್ಯಾರಿ ಹೌದಿನಿ ಹ್ಯಾರಿಯಂತೆ ಅತ್ಯಂತ ಅಪಾಯಕಾರಿ ಅಂಡರ್ವಾಟರ್ ಎಸ್ಕೇಪ್ ಮ್ಯಾಜಿಕ್ ಮಾಡಲು ಯತ್ನಿಸಿ ನೀರಿನಲ್ಲಿ ನಾಪತ್ತೆಯಾಗಿದ್ದ ಕೋಲ್ಕತ್ತಾದ ಜಾದೂಗಾರ ಚಂಚಲ್ ಲಾಹಿರಿ ಶವ ಕೊನೆಗೂ ಪತ್ತೆಯಾಗಿದೆ.
ಭಾನುವಾರ ಬೆಳಗ್ಗೆ ಅಂಡರ್ವಾಟರ್ ಎಸ್ಕೇಪ್ ಮ್ಯಾಜಿಕ್ ಮಾಡಲೆಂದು ತಮ್ಮ ಕೈಕಾಲುಗಳನ್ನು ಸಂಕೋಲೆಯಿಂದ ಬಿಗಿದುಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಬಂಧಿಯಾಗಿ ಸಾರ್ವಜನಿಕರ ಸಮ್ಮುಖದಲ್ಲಿ ಇಲ್ಲಿನ ಮಿಲೇನಿಯಮ್ ಪಾರ್ಕ್ ಪ್ರದೇಶದ ಹೌರಾ ಸೇತುವೆಯ 28ನೇ ಪಿಲ್ಲರ್ ಕೆಳಗಿಂದ ಗಂಗಾ ನದಿಗೆ ಧುಮುಕಿದ್ದರು. ಆದರೆ ಬಳಿಕ ಇವರು ಕಣ್ಮರೆಯಾಗಿದ್ದರು. ಇದೀಗ ಪೊಲೀಸರಿಂದ ತೀವ್ರ ಹುಡುಕಾಟದ ಬಳಿಕ ನದಿಯಲ್ಲಿ ಲಾಹಿರಿ ಮೃತದೇಹ ಪತ್ತೆಯಾಗಿದೆ.
40 ವರ್ಷದ ಜಾದೂಗಾರ್, ಸಂಪೂರ್ಣ ಬಂಧಿತರಾಗಿ ನೀರಿನೊಳಗೆ ಧುಮುಕಿ, ನೆರೆದವರು ನಿಬ್ಬೆರಗಾಗುವಂತೆ ಕ್ಷಣದಲ್ಲಿ ಬಂಧನ ಬಿಡಿಸಿಕೊಂಡು ನೀರಿನಿಂದ ಹೊರಬರಬೇಕಿತ್ತು. ಆದರೆ ನಿಮಿಷದೊಳಗೆ ಬಂಧನ ಕಳಚಿ ನೀರಿನಿಂದ ಹೊರಬರಬೇಕಿದ್ದ ಲಾಹಿರಿ ಗಂಟೆ ಕಳೆದರೂ ಪತ್ತೆಯಾಗಲಿಲ್ಲ. ಆಗಲೇ ನೆರೆದವರಿಗೆ ಲಹಿರಿ ಸಾವಿನ ಬಗ್ಗೆ ಶಂಕೆ ಮೂಡಿತ್ತು.
ಸಮಯ ಮೀರಿದರೂ ಬಂಧಮುಕ್ತರಾಗಿ ನದಿಯಿಂದ ಮೇಲೆ ಬರುವಲ್ಲಿ ಲಾಹಿರಿ ವಿಫಲರಾದಾಗ ಅಲ್ಲಿ ನೆರೆದಿದ್ದ ಹಲವರು ಚಿಂತೆ, ಕಳವಳದಿಂದ ಪೊಲೀಸರಿಗೆ ವಿಚಾರ ತಿಳಿಸಿದ್ದರು.