ಬೆಂಗಳೂರು, ಜೂ19(Daijiworld News/SS): ಗಣೇಶನ ಮೂರ್ತಿ ವಿಸರ್ಜನೆಯ ನಂತರ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣಗಳು ಜಲಮಾಲಿನ್ಯ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಈ ಹಿನ್ನಲೆಯಲ್ಲಿ, ಗಣೇಶನ ವಿಗ್ರಹ ಅಥವಾ ಬೇರಾವುದೇ ವಿಧದ ವಿಗ್ರಹಗಳನ್ನು ಕೆರೆಗಳಲ್ಲಿ ವಿಸರ್ಜಿಸದೆ, ಅದಕ್ಕಾಗಿ ಕೃತಕ ಕೆರೆಗಳನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಬೃಹತ್ ಬಿಬಿಎಂಪಿ ಕಟ್ಟೆಚ್ಚರ ವಹಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಮೂರ್ತಿಗಳ ವಿಸರ್ಜನೆ ಕುರಿತು ಕೇಂದ್ರ ಪರಿಸರ ಮಾಲಿನ್ಯ ಮಂಡಳಿ ಹೊರಡಿಸಿರುವ ಮಾರ್ಗಸೂಚಿ ಅನ್ವಯ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಪಿಎಸ್ಸಿ) ಹೊರಡಿಸಿರುವ ಆದೇಶ ಜಾರಿಗೊಳ್ಳಬೇಕು. ಈ ಬಗೆಗಿನ ಮಾರ್ಗಸೂಚಿಗಳನ್ನು ವ್ಯಾಪಕ ಪ್ರಚಾರದ ಮೂಲಕ ಸಾರ್ವಜನಿಕರಿಗೆ ತಿಳಿಸಬೇಕು. ಒಂದು ವೇಳೆ ಯಾರಾದರೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕ್ರಿಮಿನಲ್ ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ.
ಗಣೇಶ ಚತುರ್ಥಿ ಬಂತೆಂದರೆ ಮುಂಬೈ, ಬೆಂಗಳೂರು, ಮಂಗಳೂರು, ಹೈದರಾಬಾದ್ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಪರಿಸರ ಪ್ರೇಮಿ ಗಣೇಶ ಕೂರಿಸಿ ಎಂಬ ಕೂಗು ಕೇಳಿಬರುತ್ತದೆ. ಇದೀಗ ಪರಿಸರ ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ, ಮೂರ್ತಿ ವಿಸರ್ಜನೆಗೆ ಕೃತಕ ಕೆರೆಗಳನ್ನು ನಿರ್ಮಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.