ನವದೆಹಲಿ, ಜೂ19(Daijiworld News/SS): ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಯೋಧರಿಗೆ ಉಚಿತವಾಗಿ ರೇಷನ್ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಪುನಾರಂಭಿಸಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗಡಿ ಪ್ರದೇಶ ಮತ್ತು ಅಶಾಂತಿ ಹೆಚ್ಚಿರುವ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಯೋಧರೊಂದಿಗೆ ಶಾಂತಿಯುತ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಯೋಧರಿಗೂ ಉಚಿತ ಪಡಿತರ ನೀಡಲು ತೀರ್ಮಾನಿಸಿದ್ದಾರೆ. ರಾಜನಾಥ್ ಸಿಂಗ್ ಅವರ ಈ ನಿರ್ಧಾರದಿಂದಾಗಿ ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಯೋಧರೂ ಉಚಿತ ಪಡಿತರ ಪಡೆಯಲಿದ್ದಾರೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಕೇಂದ್ರ ಸರ್ಕಾರ ರಕ್ಷಣಾ ಪಡೆಗಳಿಗೆ ಹೆಚ್ಚಿನ ಒತ್ತು ನೀಡಿದ್ದು, ಹಲವರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. 2017ರಲ್ಲಿ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವಾಗ ಶಾಂತಿಯುತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧರಿಗೆ ಉಚಿತ ಪಡಿತರ ನೀಡುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು.
ಉಚಿತ ಪಡಿತರ ಸ್ಥಗಿತಗೊಳಿಸಿದ ನಂತರ ಪಡಿತರ ಭತ್ಯೆ ಎಂದು 96 ರೂ. ನೀಡಲಾಗುತ್ತಿತ್ತು. ಪಡಿತರ ಭತ್ಯೆಯನ್ನು ಹೆಚ್ಚಿಸಬೇಕು ಎಂದು ಯೋಧರು ಮನವಿ ಸಲ್ಲಿಸಿದ್ದರು. ಈಗ ಮತ್ತೆ ಉಚಿತ ಪಡಿತರ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿದುಬಂದಿದೆ.