ಹೊಸದಿಲ್ಲಿ, ಜೂ19(Daijiworld News/SS): ಕೇಂದ್ರ ಸರ್ಕಾರವೂ ವಾಹನ ಚಾಲನಾ ಪರವಾನಗಿ ಪಡೆಯಲು ಕನಿಷ್ಠ ಶಿಕ್ಷಣ ಅರ್ಹತೆಯಿರಬೇಕು ಎಂಬ ನಿಯಮವನ್ನು ಕೈಬಿಡಲು ನಿರ್ಧರಿಸಿದೆ.
ಈ ಹಿಂದೆ ವಾಹನ ಚಾಲನಾ ಪರವಾನಗಿ ಪಡೆಯಲು ಕನಿಷ್ಠ 8ನೇ ತರಗತಿ ಓದಿರಬೇಕು ಎಂಬ ನಿಯಮವಿತ್ತು. 1989ರ ಕೇಂದ್ರ ಮೋಟಾರು ವಾಹನಗಳ ನಿಯಮ (ರೂಲ್ 8)ರ ಅಧಿನಿಯಮದ ಪ್ರಕಾರ ಈ ನಿಯಮ ಚಾಲ್ತಿಯಲ್ಲಿದೆ. ಆದರೆ ಇದೀಗ, ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ದೃಷ್ಟಿಯಿಂದ ವಾಹನ ಚಲನಾ ಪರವಾನಗಿ ಮೇಲಿದ್ದ ಕನಿಷ್ಠ ಶಿಕ್ಷಣ ಅರ್ಹತೆ ನಿಯಮವನ್ನು ಹಿಂಪಡೆಯಲು ಕೇಂದ್ರ ಸರಕಾರ ನಿರ್ಧರಿಸಿದೆ ಎನ್ನಲಾಗಿದೆ.
ದೇಶದಲ್ಲಿ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕನಿಷ್ಠ ಶಿಕ್ಷಣ ಅರ್ಹತೆ ನಿಯಮವನ್ನು ಸಡಿಲಿಸಲು ನಿರ್ಧಾರ ಕೈಗೊಂಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಕನಿಷ್ಠ ಶಿಕ್ಷಣ ಅರ್ಹತೆ ನಿಯಮವನ್ನು ಕೈಬಿಡುವುದರಿಂದ ಸಾರಿಗೆ ವಿಭಾಗದಲ್ಲಿ ಸುಮಾರು 22 ಲಕ್ಷ ಚಾಲಕರ ಕೊರತೆ ನೀಗಲಿದೆ ಎಂದು ಅಂದಾಜಿಸಲಾಗಿದೆ.