ಬೆಂಗಳೂರು, ಜೂ 19 (Daijiworld News/MSP): ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ಶಿವಾಜಿನಗರ ಶಾಸಕ ಮತ್ತು ಮಾಜಿ ಸಚಿವ ರೋಷನ್ ಬೇಗ್ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಸಿಡಿದೆದ್ದಿದ್ದಾರೆ.
ನಾನು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹೊರತು ಸಿದ್ದರಾಮಯ್ಯ ಕಾಂಗ್ರೆಸ್ನ ಕಾರ್ಯಕರ್ತ ಅಲ್ಲ ಎಂದು ಕಿಡಿಕಾರಿದ್ದಾರೆ.
ಪಕ್ಷದಿಂದ ಉಚ್ಛಾಟನೆಯಾದ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೋಷನ್ ಬೇಗ್ ಅವರು, ನಿನ್ನೆ ರಾತ್ರಿ ನನಗೆ ಪಕ್ಷದಿಂದ ಉಚ್ಚಟಿತನಾಗಿರುವ ಕುರಿತು ಸುದ್ದಿ ಬಂತು. ಸತ್ಯ ಹೇಳಿರುವುದು ಅಪರಾಧವೇ? ಈಗಲೂ ನಾನೊಬ್ಬ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಎಂದರು. ಮಾತ್ರವಲ್ಲದೇ ಸಿದ್ದರಾಮಯ್ಯ ನಾಯಕತ್ವವನ್ನು ಪ್ರಶ್ನಿಸುವ ಮತ್ತು ಟೀಕಿಸುವ ನಾಯಕರನ್ನು ಅಮಾನತು ಮಾಡಲಾಗುತ್ತಿದೆ ಎಂದು ಬೇಗ್ ಆರೋಪಿಸಿದರು.
ಕೋಲಾರದಲ್ಲಿ ಮುನಿಯಪ್ಪ ಅವರನ್ನು ಚುನಾವಣೆಯಲ್ಲಿ ಸೋಲಿಸುವುದಾಗಿ ಬಹಿರಂಗ ಹೇಳಿಕೆ ನೀಡಿದವರ ಮೇಲೆ ಕ್ರಮ ತೆಗೆದುಕೊಂಡಿಲ್ಲ? ಮಂಡ್ಯದಲ್ಲಿ ಸುಮಲತಾ ಭೇಟಿಯಾಗಿ ಅವರಿಗೆ ಬೆಂಬಲ ಸೂಚಿಸಿದವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ? ರಮೇಶ್ ಜಾರಕಿಹೊಳಿ, ತುಮಕೂರಿನ ರಾಜಣ್ಣ ಅವರ ವಿರುದ್ದ ಕ್ರಮ ಕೈಗೊಳ್ಳಲಿಲ್ಲ ಆದರೆ ನನ್ನೊಬ್ಬನನ್ನೆ ಯಾಕೆ ಟಾರ್ಗೆಟ್ ಮಾಡಿರುವುದು ಎಂದು ಪ್ರಶ್ನಿಸಿದರು.
ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸದಸ್ಯ. ಆದರೆ ಸಿದ್ದರಾಮಯ್ಯ ಅವರ ಕಾಂಗ್ರೆಸ್ ನಲ್ಲಿ ಇಲ್ಲ. ಹೀಗಾಗಿ ನನ್ನ ವಿರುದ್ಧ ಕ್ರಮಕ್ಕೆ ಸಿದ್ಧರಾಮಯ್ಯ ಅವರು ಒತ್ತಡ ಹಾಕಿದ್ದಾರೆ ಎಂದು ಕಿಡಿ ಕಾರಿದರು.