ಬೆಂಗಳೂರು, ಜೂ19(Daijiworld News/SS): ಜೂ.20ರಿಂದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಬೀಳಲಿದೆ. ಆದರೆ ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಮುಂದಿನ 8 ದಿನಗಳ ನಂತರ ಮಳೆಯಾಗಬಹುದು ಎಂದು ಇಲಾಖೆ ತಿಳಿಸಿದೆ.
ಫೊನಿ ಹಾಗೂ ವಾಯು ಚಂಡಮಾರುತಗಳು ನೈರುತ್ಯ ಮುಂಗಾರನ್ನು ದುರ್ಬಲಗೊಳಿಸಿದ್ದವು. ಎರಡೂ ಚಂಡಮಾರುತಗಳು ಕಣ್ಮರೆ ಆದರೂ ಅವುಗಳ ಪರಿಣಾಮ ಮಾತ್ರ ಇನ್ನೂ ಪೂರ್ಣಪ್ರಮಾಣದಲ್ಲಿ ಕುಗ್ಗಿರಲಿಲ್ಲ. ಇದರಿಂದಾಗಿಯೇ ಮುಂಗಾರಿಗೆ ಅಗತ್ಯವಾಗಿರುವ ಮೋಡಗಳು ಸೃಷ್ಟಿಯಾಗಲು ವಿಳಂಬವಾಗಿದೆ. ಪ್ರಸ್ತುತ ಗಮನಿಸಿದರೆ ಇನ್ನೆಂಟು ದಿನ ಕಳೆದ ನಂತರವಷ್ಟೇ ಸ್ಪಷ್ಟ ಚಿತ್ರಣ ಕಾಣಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೀವ್ರ ತರದ ಜಲಕ್ಷಾಮದಿಂದ ಕಂಗಾಲಾಗಿರುವ ಕರಾವಳಿಯ ಜನರು ಯಾವಾಗ ಮಳೆ ಆರಂಭವಾಗುತ್ತದೆ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ರೈತರು ಕೃಷಿ ಚಟುವಟಿಕೆ ಆರಂಭಿಸಲು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಸ್ಕೈಮೇಟ್ ಮತ್ತು ಹವಾಮಾನ ಇಲಾಖೆ ಪ್ರಕಟಿಸಿರುವ ವರದಿ ಕೃಷಿಕರಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ.
ಕರಾವಳಿಯ ಪ್ರಮುಖ ಬೆಳೆಯಾಗಿರುವ ಭತ್ತಕ್ಕೆ ಗದ್ದೆ ಉಳುಮೆ, ನಾಟಿ ಮೊದಲಾದ ಪ್ರಕ್ರಿಯೆ ಸಾಮಾನ್ಯವಾಗಿ ಮೇ ಅಂತ್ಯದಲ್ಲಿ ಚಾಲನೆ ದೊರೆಯುತ್ತದೆ. ಈ ವೇಳೆ ಒಂದಷ್ಟು ಮಳೆಯಾಗಿ ಬೆಟ್ಟುಗದ್ದೆಯಲ್ಲಿ ನೀರು ನಿಲ್ಲುವುದರಿಂದ ರೈತರು ಕೆಲಸ ಆರಂಭಿಸುತ್ತಾರೆ. ಆದರೆ ಈ ಬಾರಿ ಉಭಯ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ.