ಶಿವಮೊಗ್ಗ, ಮೇ. 13 (DaijiworldNews/AK): ಪ್ರಧಾನಿ ನರೇಂದ್ರ ಮೋದಿಜೀ ಅವರು ಕದನವಿರಾಮ ಘೋಷಿಸಿದ್ದರೆ ಅದು ಶಾಶ್ವತ ಅಲ್ಲ ಎಂದು ಪ್ರಧಾನಿಯವರೇ ಸ್ಪಷ್ಟಪಡಿಸಿದ್ದಾರೆ. ಇದನ್ನು ಕಾಂಗ್ರೆಸ್ಸಿನವರು ಅರ್ಥ ಮಾಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಎಚ್ಚರಿಸಿದರು.

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಸಚಿವ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ಸಿನ ಇತರ ಮುಖಂಡರು ಆಪರೇಷನ್ ಸಿಂಧೂರ ಕದನವಿರಾಮದ ಬಳಿಕ ಸ್ವಲ್ಪ ಹಗುರವಾಗಿ ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿಜೀ ಅವರು ಅಮೆರಿಕ ಅಧ್ಯಕ್ಷ ಟ್ರಂಪ್ಗೆ ಶರಣಾಗಿದ್ದಾರೆ ಎಂಬಂತೆ ಟೀಕಿಸಿದ್ದಾರೆ ಎಂದು ಆಕ್ಷೇಪಿಸಿದರು.
ಕದನವಿರಾಮ ಎಂಬುದು ಒಂದು ರಾಜನೀತಿ ಎಂದು ವಿವರಿಸಿದರು. ಪ್ರತಿಯೊಬ್ಬ ಭಾರತೀಯರೂ ಸೇನೆ ಜೊತೆ ಇರಬೇಕು ಎಂದು ನೆನಪಿಸಲು ಬಯಸುವುದಾಗಿ ಹೇಳಿದರು. ಪ್ರಧಾನಿಯವರು ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.
ನಮ್ಮ ದಾಳಿಗೆ ಬೆದರಿದ ಪಾಕಿಸ್ತಾನವು ಬೆದರಿ ಅಮೆರಿಕದ ಸಹಾಯ ಕೇಳಿದ್ದನ್ನು ಆಲೋಚಿಸಬೇಕು. ಇನ್ನೇನಾದರೂ ಅಹಿತಕರ ಘಟನೆ ಆದರೆ ಕಣ್ಮುಚ್ಚಿಕೊಂಡು ಕೂರುವ ಪ್ರಶ್ನೆ ಇಲ್ಲ ಎಂದು ಪ್ರಧಾನಿಯವರು ಹೇಳಿದ್ದಾರೆ ಎಂದು ವಿವರಿಸಿದರು. ಏನೇ ದುರ್ಘಟನೆ ಆದರೂ ಯುದ್ಧವೆಂದು ಪರಿಗಣಿಸಿ ಪ್ರತೀಕಾರ ತೀರಿಸುವುದಾಗಿ ಹೇಳಿದ್ದಾರೆ ಎಂದರು.
ಪಕ್ಷರಹಿತವಾಗಿ ತಿರಂಗಾ ಯಾತ್ರೆ
ಆಪರೇಷನ್ ಸಿಂದೂರದ ಬಳಿಕ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ಜೀ ಅವರು ಒಂದು ಕರೆ ನೀಡಿದ್ದಾರೆ. ಇಡೀ ದೇಶದ ಎಲ್ಲ ರಾಜ್ಯಗಳಲ್ಲಿ ತಿರಂಗಾ ಯಾತ್ರೆ ನಡೆಸಬೇಕು. ‘ರಾಷ್ಟ್ರ ರಕ್ಷಣೆಗಾಗಿ ನಾಗರಿಕರು’ ಅಡಿಯಲ್ಲಿ ಆಪರೇಷನ್ ಸಿಂದೂರದ ಜೊತೆ ನಾವಿದ್ದೇವೆ; ಭಾರತದ ಸೇನೆ ಜೊತೆ ನಾವೆಲ್ಲರೂ ಇದ್ದೇವೆ ಎಂದು ಸಂದೇಶ ನೀಡಬೇಕು ಎಂದಿದ್ದಾರೆ. ಕರ್ನಾಟಕದಲ್ಲೂ ತಿರಂಗಾ ಯಾತ್ರೆ ಮಾಡಲಿದ್ದೇವೆ ಎಂದು ವಿವರಿಸಿದರು.
ಮೇ 15ರಂದು ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ ಇದೆ. ನಿವೃತ್ತ ಯೋಧರು, ಅವರ ಕುಟುಂಬದ ಸದಸ್ಯರು, ರೈತರು, ವೈದ್ಯರು, ಎಂಜಿನಿಯರ್ಗಳು ಸೇರಿ ಎಲ್ಲ ವೃತ್ತಿನಿರತರು, ಎಲ್ಲ ವರ್ಗದ ಜನರು ಭಾಗವಹಿಸುತ್ತಾರೆ ಎಂದು ತಿಳಿಸಿದರು. ಮೇ 15ರಂದು ಮಂಗಳೂರು, ಬೆಳಗಾವಿ ಮತ್ತಿತರ ಪ್ರಮುಖ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಮೇ 16ರಂದು ಶಿವಮೊಗ್ಗ ಮತ್ತಿತರ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸುತ್ತೇವೆ ಎಂದು ಹೇಳಿದರು.
ಮೇ 18ರಿಂದ 23ರವರೆಗೆ ತಾಲ್ಲೂಕು ಕೇಂದ್ರಗಳಲ್ಲಿ ತಿರಂಗಾ ಯಾತ್ರಾ ನಡೆಸಲಾಗುವುದು. ದೇಶದ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.