ನವದೆಹಲಿ,ಜೂ19(DaijiworldNews/AZM):ಜನರಿಗೆ ಇವಿಎಂ ಮೇಲೆ ಅನುಮಾನವಿದ್ದು, ಇವಿಎಂ ಮತಯಂತ್ರದ ಬಗ್ಗೆ ಮಾತನಾಡಲು ಸಭೆ ಕರೆಯುವ ಅಗತ್ಯವಿದೆ. ಹಾಗೆ ಕರೆದರೆ ಆ ಸಭೆಗೆ ನಾನು ಬರುತ್ತೇನೆ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ತಿಳಿಸಿದ್ದಾರೆ.
ಒಂದು ದೇಶ ಮತ್ತು ಒಂದು ಚುನಾವಣೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಸುತ್ತ ಚರ್ಚಿಸಲು ಇಂದು ಪ್ರಧಾನಿ ನರೇಂದ್ರ ಮೋದಿಯವರು ಸರ್ವಪಕ್ಷಗಳ ಸಭೆ ಕರೆದಿದ್ದು, ಈ ಸಭೆಯಲ್ಲಿ ಮಾಯವತಿ ಯವರು ಹಾಜರಾಗಿರಲಿಲ್ಲ. ಇದಕ್ಕೆ ಅವರು ಸೂಕ್ತ ಕಾರಣನೂ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇವಿಎಂ ಯಂತ್ರದ ಕುರಿತಾಗಿ ಸಭೆ ಕರೆಯಬೇಕಿತ್ತು. ನಾನು ಹೇಳಿದ ವಿಚಾರಕ್ಕೆ ಸರ್ವಪಕ್ಷಗಳ ಸಭೆ ಕರೆದಿದ್ದರೆ ಭಾಗಿಯಾಗುತ್ತಿದ್ದೆ ಎಂದಿದ್ದಾರೆ.
ಇನ್ನು ಜನರಿಗೆ ಇವಿಎಂ ಬಗ್ಗೆ ಅನುಮಾನವಿದೆ. ಬ್ಯಾಲೆಟ್ ಪೇಪರ್ ಬದಲಾಗಿ ಇವಿಎಂ ಮೂಲಕ ಚುನಾವಣೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಅಪಾಯ. ಹೀಗಾಗಿ ಇವಿಎಂ ಮತಯಂತ್ರದ ಬಗ್ಗೆ ಮಾತನಾಡಲು ಸಭೆ ಕರೆಯುವ ಅಗತ್ಯವಿದೆ. ಹಾಗೇ ಕರೆದರೆ ನಾನೂ ಸಭೆಗೆ ತೆರಳುತ್ತೇನೆ" ಎಂದು ಮಾಯಾವತಿ ತಿಳಿಸಿದ್ದಾರೆ.
ಇನ್ನು ಸಭೆಗೆ ವಿರೋಧ ಪಕ್ಷದ ನಾಯಕರಾದ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಡಿಎಂಕೆ ವರಿಷ್ಠ ಸ್ಟಾಲಿನ್, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರು ಕೂಡ ಗೈರಾಗಿದ್ದಾರೆ.
ಹಾಗೆಯೇ ಕಾಂಗ್ರೆಸ್ ಕೂಡ ಸಭೆಗೆ ಹಾಜರಾಗಿಲ್ಲ ಎನ್ನಲಾಗಿದೆ. ಹಿಂದಿನಿಂದಲೂ ಬಿಜೆಪಿ ಪ್ರಸ್ತಾಪದ ಈ ವಿಷಯವನ್ನು ಕಾಂಗ್ರೆಸ್ ವಿರೋಧಿಸುತ್ತಾ ಬಂದಿತ್ತು. ಅಂತೆಯೇ ಈಗ ಸಭೆಗೆ ಗೈರಾಗುವ ಮೂಲಕ ಕಾಂಗ್ರೆಸ್ ತನ್ನ ನಿಲುವಿಗೆ ಬದ್ದವಾಗಿದೆ ಎನ್ನುತ್ತಿವೆ ಮೂಲಗಳು.