ಕೊಡಗು,ಜೂ19(DaijiworldNews/AZM):ನಾಳೆಯಿಂದ(ಜೂ.20) ಮುಂದಿನ 2 ವಾರಗಳವರೆಗೆ ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಳ್ಳಲಿದ್ದು, ಸಾರ್ವಜನಿಕರು ಎಚ್ಚರವಹಿಸಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ಅಪಾಯದ ಅಂಚಿನಲ್ಲಿರುವ ಮತ್ತು ಅಪಾಯಕಾರಿ ಪ್ರದೇಶಗಳಲ್ಲಿನ ಮನೆಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳು ಮನೆ ತೆರವು ಮಾಡುವಂತೆ ಸ್ಥಳೀಯ ಪ್ರಾಧಿಕಾರ ಸೂಚಿಸಿದೆ. ಈ ಕುಟುಂಬಗಳು ಬೇರೆ ವಸತಿ ಪ್ರದೇಶಗಳಿಗೆ ತೆರಳಲು ಅನುಕೂಲವಾಗುವ ದೃಷ್ಟಿಯಿಂದ ತಿಂಗಳಿಗೆ 10,000 ರೂಪಾಯಿಯಂತೆ ಮೂರು ತಿಂಗಳವರೆಗೆ ಬಾಡಿಗೆ ಭತ್ಯೆಯನ್ನು ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಪ್ರಸ್ತುತ 2019ರ ಜೂನ್ ತಿಂಗಳ ಬಾಡಿಗೆ ಹಣವನ್ನು ಈಗಾಗಲೇ ಸಂಬಂಧಪಟ್ಟ ಸಂತ್ರಸ್ತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಸಂತ್ರಸ್ತರು ತಮಗೆ ಯಾವುದೇ ನೆರವು ಅಗತ್ಯವಿದ್ದರೆ ಹಾಗೂ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಸಂಬಂಧಪಟ್ಟ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಎದುರಾದರೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ 08272-221077 ಟೋಲ್ ಫ್ರೀ ತುರ್ತು ಸೇವೆಯ ದೂರವಾಣಿ ಸಂಖ್ಯೆ ಹಾಗೂ 8550001077 ವಾಟ್ಸಾಪ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.