ಬೆಂಗಳೂರು, ಜೂ 19 (Daijiworld News/SM): ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆಯವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ಮಾಡಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಇನ್ನು ಇದಕ್ಕೂ ಮುನ್ನ ಸಿಎಂ ಹೆಚ್ ಡಿ ದೇವೇಗೌಡರನ್ನು ಭೇಟಿಯಾಗಿ ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಸುದೀರ್ಘ ೨ ತಾಸು ಚರ್ಚೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗುವಂತೆ ದೇವೇಗೌಡ ಸೂಚಿಸಿದ್ದರು.
ಪಕ್ಷದ ಹಿರಿಯರ ನಿರ್ದೇಶನದಂತೆ ಖರ್ಗೆಯವರನ್ನು ಭೆಟಿಯಾಗಿರುವ ಸಿಎಂ ರಾಜ್ಯ ರಾಜಕೀಯ ವಿದ್ಯಾಮಾನಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಮಾಜಿ ಸಿಎಂ ಸಿದ್ದರಾಮಯ್ಯ ನಡವಳಿಕೆಯ ಬಗ್ಗೆ ಖರ್ಗೆಯವರಿಗೆ ತಿಳಿಸಿದ್ದಾರೆ. ಅಲ್ಲದೆ ರಾಜ್ಯ ರಾಜಕಾರಣಕ್ಕೆ ಬರುವಂತೆ ಖರ್ಗೆಯವರನ್ನು ಸಿಎಂ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಆ ಮೂಲಕ ಸಮನ್ವಯ ಸಮಿತಿ ಸೇರಿದಂತೆ ಸಮ್ಮಿಶ್ರ ಸರಕಾರದಿಂದ ಸಿದ್ದರಾಮಯ್ಯನವರನ್ನು ದೂರ ಮಾಡಬೇಕೆನ್ನುವ ತಂತ್ರ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಖರ್ಗೆ ಜತೆಗೆ ಮಾತುಕತೆ ನಡೆಸಿರುವ ಸಿಎಂ, ನೀವು ರಾಜ್ಯ ರಾಜಕೀಯಕ್ಕೆ ಬಂದರೆ ಮೈತ್ರಿ ಸರ್ಕಾರದ ಎಲ್ಲಾ ಗೊಂದಲಗಳು ಬಗೆಹರಿಯವೆ ಎಂದು ತಿಳಿಸಿದ್ದಾರೆ. ಅಲ್ಲದೆ ತಾವು ರಾಜ್ಯ ರಾಜಕಾರಣಕ್ಕೆ ಬರುವುದೇ ಆದಲ್ಲಿ ಸೂಕ್ತ ವೇದಿಕೆ ಕಲ್ಪಿಸುವುದಾಗಿಯೂ ಸಿಎಂ ಭರವಸೆ ನೀಡಿದ್ದಾರೆ.