ಕಾಶ್ಮೀರ, ಜೂ20(Daijiworld News/SS): ಲಷ್ಕರ್-ಎ-ತೊಯ್ಬಾ (ಎಲ್ಇಟಿ), ಜೈಷ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಗಳು ಪುಲ್ವಾಮಾ ರೀತಿಯಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿವೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.
ಪಾಕಿಸ್ತಾನ ಮೂಲದ ಉಗ್ರರು ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಭಾರತದ ಭದ್ರತಾ ಪಡೆಗಳು ಮತ್ತು ಸೇನಾ ಪ್ರದೇಶಗಳ ಮೇಲೆ ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ದಕ್ಷಿಣ ಮತ್ತು ಉತ್ತರ ಕಾಶ್ಮೀರದ ಸೇನಾ ಶಿಬಿರ, ಯೋಧರು ಸಂಚರಿಸುವ ಮಾರ್ಗಗಳನ್ನು ಉಗ್ರರು ಗುರಿಯಾಗಿರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ, ಬಾರಾಮೂಲದ ಸೆಕ್ಟರ್ ಮತ್ತು ಕುಪ್ವಾರದ ಹೆದ್ದಾರಿಗಳಲ್ಲಿ ಸೇನಾ ಸಿಬ್ಬಂದಿ ಸಂಚಾರದ ವೇಳೆ ಜಾಗ್ರತೆ ವಹಿಸುವಂತೆ ಬೇಹುಗಾರಿಕಾ ದಳ ಸೇನೆಗಳಿಗೆ ಸೂಚನೆಯನ್ನು ನೀಡಿದೆ. ನೇಪಾಳ ಮೂಲಕ ಭಾರತ ಪ್ರವೇಶಿಸುವ ಪ್ರಯತ್ನವನ್ನು ಪಾಕ್ನ ಗುಪ್ತಚರ ಇಲಾಖೆ ಐಎಸ್ಐ ಮಾಡುತ್ತಿದೆ ಎನ್ನಲಾಗಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ನಡೆದ ಪುಲ್ವಾಮಾ ದಾಳಿಯ ನಂತರ ಭಾರತದ ಭದ್ರತಾಪಡೆಗಳು ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, 50ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿವೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಉಗ್ರರು ದಾಳಿಗೆ ಸಂಚು ನಡೆಸುತ್ತಿದ್ದಾರೆ.