ನವದೆಹಲಿ, ಜೂ20(Daijiworld News/SS): ಕರ್ನಾಟಕದ ಅಭಿವೃದ್ಧಿಯ ಬಗ್ಗೆ ರಾಜಕೀಯ ಮೀರಿ ಕೆಲಸ ಮಾಡಿದ್ದೇವೆ. ಯಶಸ್ಸೂ ಕಂಡಿದ್ದೇವೆ, ಮುಂದೆಯೂ ಮಾಡುತ್ತೇವೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಭರವಸೆ ನೀಡಿದ್ದಾರೆ.
ಸಂಸದರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿಗೆ ಒಟ್ಟು 2.42 ಲಕ್ಷ ಕೋಟಿ ಅನುದಾನ ದೊರಕಿದೆ. ಇಷ್ಟು ಮೊತ್ತದ ಹಣ ರಾಜ್ಯಕ್ಕೆ ದೊರಕಿರುವುದು ಇತಿಹಾದಲ್ಲಿಯೇ ಮೊದಲು ಎಂದು ಹೇಳಿದರು.
ರಾಜ್ಯದ ಬೇರೆ ಬೇರೆ ವಿಚಾರಗಳ ಬಗ್ಗೆ ಲೋಕಸಭೆಯಲ್ಲಿ ಮಾಡುವ ಪ್ರಸ್ತಾಪ, ಮಂತ್ರಿಯೊಡನೆ ಮಾಡುವ ಮಾತುಕತೆಗಳು ಸುಸೂತ್ರವಾಗಿ ನಡೆದರೆ ರಾಜ್ಯಕ್ಕೆ ಬರುವ ಎಲ್ಲ ಅನುದಾನಗಳು ಏಕರೂಪವಾಗಿ ಕೇಂದ್ರದಿಂದ ಬರಲು ಅನುಕೂಲವಾಗುತ್ತದೆ. ಈ ಹಿಂದೆಯೂ ನಾವು ಒಟ್ಟಿಗೆ ಸೇರುವ ಪ್ರಯತ್ನ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕಳೆದ ಒಂದು ವರ್ಷದಿಂದ ನಡೆದ ಬೇರೆ ಬೇರೆ ವಿದ್ಯಮಾನಗಳನ್ನು ನೋಡಿದಾಗ ರಾಜ್ಯದ ಹಿತಾಸಕ್ತಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ನಮ್ಮ ಸಾಮೂಹಿಕ ಪ್ರಯತ್ನಗಳು ನಡೆಯುತ್ತಿದೆ. ಕಾವೇರಿ, ಕೃಷ್ಣಾ, ಕಳಸಾ ಬಂಡೂರಿ, ಮೇಕೆದಾಟು ವಿಚಾರಗಳಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದೇವೆ. ಅವುಗಳ ವಿಚಾರದಲ್ಲಿ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.
ಈ ಹಿಂದೆ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ರಾಜಕೀಯ ಮೀರಿ ಕೆಲಸ ಮಾಡಿದ್ದೇವೆ. ಯಶಸ್ಸೂ ಕಂಡಿದ್ದೇವೆ. ಎಲ್ಲರೂ ಒಟ್ಟಾಗಿ ನಮ್ಮ ಬೇಡಿಕೆ ಮುಂದಿಟ್ಟು ನಮ್ಮ ಕೆಲಸ ಮಾಡಿದ್ದೇವೆ. ಈಗ ಕರ್ನಾಟಕ ಇನ್ನಷ್ಟು ಅಭಿವೃದ್ಧಿ ಕಾಣುತ್ತಿದೆ. ಮುಂದೆಯೂ ಒಟ್ಟಾಗಿ ರಾಜ್ಯದ ಅಭಿವೃದ್ಧಿ ಪರ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.